ಬೆಂಗಳೂರು ಉತ್ತರ ತಾಲೂಕಿನ ವಿಶೇಷ ತಹಶೀಲ್ದಾರ್ ವರ್ಷಾ ಒಡೆಯರ್ ಹಾಗೂ ಮಧ್ಯವರ್ತಿ ರಮೇಶ್ ಎಂಬವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಜಮೀನಿನ ಖಾತೆ ಬದಲಾವಣೆಗೆ 5 ಲಕ್ಷ ಲಂಚ ಪಡೆಯುತ್ತಿದ್ದಾಗ ವರ್ಷಾರನ್ನು ಬಂಧಿಸಲಾಗಿದೆ. ದಾಸನಪುರ ಹೋಬಳಿ ವ್ಯಾಪ್ತಿಯ ಕೆಂಗನಹಳ್ಳಿ ಗ್ರಾಮದಲ್ಲಿ ಲಲಿತ್ಕುಮಾರ್ ಎಂಬವರಿಂದ ವ್ಯಕ್ತಿಯೊಬ್ಬರು 2 ಎಕರೆ ಜಮೀನು ಖರೀದಿಸಿದ್ದರು.
ಲಲಿತ್ ಅವರ ಹೆಸರೇ ಪಹಣಿಯಲ್ಲಿ ನಮೂದಾಗಿರಲಿಲ್ಲ. ಅವರ ಪರವಾಗಿ ಕಾಂತರಾಜು ಉಪ ವಿಭಾಗಾಧಿಕಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪಹಣಿಯಲ್ಲಿ ಲಲಿತ್ ಹೆಸರು ನಮೂದಿಸುವಂತೆ ಉಪ ವಿಭಾಗಾಧಿಕಾರಿ ನ್ಯಾಯಾಲಯ ಅ.22ರಂದು ಆದೇಶ ಹೊರಡಿಸಿತ್ತು.
ಉಪ ವಿಭಾಗಾಧಿಕಾರಿ ಆದೇಶದಂತೆ ಪಹಣಿ ತಿದ್ದುಪಡಿಗೆ ಕಾಂತರಾಜು ಅರ್ಜಿ ಸಲ್ಲಿಸಿದ್ದರು. ಪ್ರತಿ ಎಕರೆಗೆ 5 ಲಕ್ಷದಂತೆ 10 ಲಕ್ಷ ಲಂಚ ನೀಡುವಂತೆ ವಿಶೇಷ ತಹಶೀಲ್ದಾರ್ ಮಧ್ಯವರ್ತಿ ರಮೇಶ್ ಮೂಲಕ ಅರ್ಜಿದಾರರಿಗೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಅರ್ಜಿದಾರರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಸೇಂಟ್ ಮಾರ್ಥಾಸ್ ಆಸ್ಪತ್ರೆ ವಾಹನ ನಿಲುಗಡೆ ತಾಣದ ಬಳಿ ಬಂದು ಹಣ ತಲುಪಿಸುವಂತೆ ಮಧ್ಯವರ್ತಿ ಕಾಂತರಾಜುಗೆ ಸೂಚಿಸಿದ್ದರು. ಕಾಂತರಾಜು 5 ಲಕ್ಷ ನೀಡಿದರು. ತಕ್ಷಣ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು, ರಮೇಶ್ ಅವರನ್ನು ಬಂಧಿಸಿದರು.
ನನ್ನದೇನೂ ತಪ್ಪಿಲ್ಲ. ತಹಶೀಲ್ದಾರ್ ವರ್ಷಾ ಅವರ ಸೂಚನೆಯಂತೆ ಹಣ ಪಡೆದಿದ್ದೇನೆ ಎಂದು ರಮೇಶ್ ತಿಳಿಸಿದ್ದು, ವಿಶೇಷ ತಹಶೀಲ್ದಾರ್ ಕಚೇರಿಗೆ ಬಂದ ರಮೇಶ್, ಮೇಡಂ ವ್ಯವಹಾರ ಮುಗಿದಿದೆ ಎಂದು ಹೇಳಿದಾಗ ಹಣ ಕೊಡು ಎಂದು ವರ್ಷಾ 5 ಲಕ್ಷ ಪಡೆದುಕೊಂಡರು ಎಂದು ಹೇಳಲಾಗಿದೆ.