ರಾಮನಗರದ ರಿಯಲ್ ಎಸ್ಟೇಟ್ ಉದ್ಯಮಿ ಲಿಂಗೇಶ್ ಕುಮಾರ್ಗೆ ಕೆಲ ದಿನಗಳ ಹಿಂದೆ ಪ್ರದೀಪ್ ಎಂಬಾತ 2 ಸಾವಿರ ರೂ.ಮುಖ ಬೆಲೆಯ ನೋಟು ರದ್ದಾಗಲಿದೆ. ನನ್ನ ಪರಿಚಿತರ ಬಳಿ 2 ಸಾವಿರ ಮುಖ ಬೆಲೆಯ ನೂರಾರು ಕೋಟಿ ರೂಪಾಯಿ ಇದೆ. ಅವರಿಗೆ 500 ಮುಖ ಬೆಲೆಯ ನೋಟು ಕೊಟ್ಟರೆ ಶೇ.10ರಷ್ಟು ಕಮಿಷನ್ ಕೊಡುತ್ತಾರೆ ಎಂದು ನಂಬಿಸಿದ್ದ. ಪ್ರದೀಪ್ ಮಾತಿಗೆ ಮರುಳಾಗಿ ಲಿಂಗೇಶ್ ತನ್ನ ಬಳಿಯಿರುವ 50 ಲಕ್ಷ ರೂ.ಅನ್ನು ನೀಡುವುದಾಗಿ ಹೇಳಿದ್ದ.
ಅಕ್ಟೋಬರ್ 2ರಂದು 50 ಲಕ್ಷ ರೂ. ಹಣದೊಂದಿಗೆ ರಾಮನಗರದಿಂದ ಬೆಂಗಳೂರಿಗೆ ಬರುತ್ತಿದ್ದ ಲಿಂಗೇಶ್, ಹಣ ಬದಲಾವಣೆಗೆ ಪ್ರದೀಪ್ ಕಾರಿನಲ್ಲಿ ಎಲೆಕ್ಟ್ರಾನಿಕ್ ಸಿಟಿಯ ಸಿಂಗಸಂದ್ರಕ್ಕೆ ಹೋಗಿದ್ದಾನೆ. ಈ ವೇಳೆ ನೋಟು ಬದಲಾವಣೆಗೆ ಕಮಿಷನ್ ಕೊಡುವುದಾಗಿ ಹೇಳಿದ್ದ ವೆಟ್ರಿವೇಲು ಹಾಗೂ ಶ್ಯಾಮ್ ಎಂಬಾತನನ್ನು ಪ್ರದೀಪ್ ಭೇಟಿ ಮಾಡಿಸಿದ್ದ.
ಈ ಪ್ರದೇಶದಲ್ಲಿ ಹಣ ಬದಲಾವಣೆ ಮಾಡುವುದು ಕಷ್ಟ ಎಂದ ವೆಟ್ರಿವೇಲು ಹಾಗೂ ಶ್ಯಾಮ್, ಜ್ಞಾನಭಾರತಿ ವಿಶ್ವವಿದ್ಯಾಲಯದ ಬಳಿ ಹೋಗೋಣ ಎಂದು ಸ್ಥಳ ಬದಲಾಯಿಸಿದರು. ಆ ಬಳಿಕ ವೆಟ್ರಿವೇಲು ಚಂದ್ರಾಲೇಔಟ್ಗೆ ಲಿಂಗೇಶ್ನನ್ನು ಕರೆದುಕೊಂಡು ಹೋಗಿ ನಾಲ್ವರು ಡೀಲ್ ಬಗ್ಗೆ ಮಾತನಾಡುತ್ತಿದ್ದಾಗ ಸ್ಥಳಕ್ಕೆ ಬಂದ ಹೆಡ್ ಕಾನ್ಸ್ಟೇಬಲ್ ವಿಚಾರಣೆ ನಡೆಸಿದ್ದಾನೆ. ಆಗ ಈ ನಾಲ್ವರ ನಡವಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಾಗ ಕಾರು ಪರಿಶೀಲಿಸಿದ್ದು, 50 ಲಕ್ಷ ರೂ. ನಗದು ಪತ್ತೆಯಾಗಿತ್ತು. ಕೂಡಲೇ 50 ಲಕ್ಷ ರೂ. ಜಪ್ತಿ ಮಾಡಿ, ನಾಲ್ವರನ್ನೂ ಠಾಣೆಗೆ ಕರೆತಂದು ಪ್ರಕರಣ ದಾಖಲಿಸುವುದಾಗಿ ಕಾನ್ಸ್ಟೇಬಲ್ ಮಹೇಂದ್ರಗೌಡ ಬೆದರಿಸಿದ್ದಾನೆ.
ಠಾಣೆಯಲ್ಲಿ ಮೇಲಾಧಿಕಾರಿಗಳ ಬಳಿ 40 ಲಕ್ಷ ರೂ. ಪತ್ತೆಯಾಗಿದ್ದು, ಜಪ್ತಿ ಮಾಡಿರುವುದಾಗಿ ಹೇಳಿದ್ದಾರೆ. ಆದರೆ, ಮೇಲಧಿಕಾರಿಗಳು ಉದ್ಯಮಿ ಲಿಂಗೇಶ್ರನ್ನು ಪ್ರಶ್ನಿಸಿದಾಗ ನಾನು ತಂದಿದ್ದು 50 ಲಕ್ಷ ರೂ. ಎಂದಿದ್ದಾರೆ. ಕೂಡಲೇ 50 ಲಕ್ಷ ರೂ.ಪೈಕಿ 10 ಲಕ್ಷ ರೂ. ಕಳವಾಗಿರುವ ಬಗ್ಗೆ ಚಂದ್ರಾಲೇಔಟ್ ಪೊಲೀಸರಿಗೆ ಉದ್ಯಮಿ ಲಿಂಗೇಶ್ ದೂರು ನೀಡಿದ್ದಾನೆ.
ತನಿಖೆ ಆರಂಭಿಸಿದ ಹಿರಿಯ ಅಧಿಕಾರಿಗಳಿಗೆ ಹೆಡ್ ಕಾನ್ಸ್ಟೇಬಲ್ ಮಹೇಂದ್ರನ ಕಳ್ಳ- ಪೊಲೀಸ್ ಆಟ ಬಯಲಾಗಿದೆ. ಮಾರ್ಗಮಧ್ಯೆಯೇ ಹೆಡ್ ಕಾನ್ಸ್ಟೇಬಲ್ ಮಹೇಂದ್ರ 10 ಲಕ್ಷ ರೂ. ಲಪಟಾಯಿಸಿರುವುದು ಪತ್ತೆಯಾಗಿದೆ. ಕೂಡಲೇ ಮಹೇಂದ್ರನನ್ನು ಬಂಧಿಸಿ ವಿಚಾರಣೆ ನಡೆಸಿದಾಗ 10 ಲಕ್ಷ ರೂಪಾಯಿಯನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಇತ್ತ 50 ಲಕ್ಷ ರೂ. ಅನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಅಡಿ ಲಿಂಗೇಶ್, ಪ್ರದೀಪ್, ವೆಟ್ರಿವೇಲು, ಶ್ಯಾಮ್ನನ್ನು ಪೊಲೀಸರು ಬಂಧಿಸಿದ್ದಾರೆ. ಜತೆಗೆ ಹೆಡ್ ಕಾನ್ಸ್ಟೇಬಲ್ ಮಹೇಂದ್ರನಿಗೆ ಮಾಹಿತಿ ಕೊಟ್ಟ ಶಶಿಧರ್ನನ್ನು ಕೂಡ ಬಂಧಿಸಲಾಗಿದೆ. ಮಹೇಂದ್ರಗೌಡನನ್ನು ಅಮಾನತು ಮಾಡಿ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ಆದೇಶಿಸಿದ್ದಾರೆ.