ಮಂಗಳೂರು: ಲೈಂಗಿಕವಾಗಿ ಬಳಸಿಕೊಂಡು 300 ರೂಪಾಯಿ ಹಣ ನೀಡದೇ ನಿರಾಕರಿಸಿದ್ದಕ್ಕಾಗಿ ವೃದ್ಧನನ್ನು ಯುವಕನೊಬ್ಬ ಕತ್ತು ಹಿಸುಕಿ ಕೊಂದಿರುವ ಆಘಾತಕಾರಿ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ.

ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ.

ನಗರದ ಮಂದಾರಬೈಲು ಜಯಾನಂದ ಆಚಾರ್ಯ(65) ಮೃತ ವ್ಯಕ್ತಿ. ಕುಂಜತ್ ಬೈಲ್ ಪ್ರದೇಶದ ದೇವಿನಗರ ನಿವಾಸಿ ರಾಜೇಶ್ ಪೂಜಾರಿ(31) ಕೊಲೆ ಆರೋಪಿ. ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಹರಿಪದವು ಎಂಬಲ್ಲಿನ ಕಿಯೋನಿಕ್ಸ್​ಗೆ ಸೇರಿದ ಪ್ರದೇಶದಲ್ಲಿ ಈ ಪ್ರಕರಣ ನಡೆದಿದೆ.

ಕೊಲೆಯಾದ ಜಯಾನಂದ ಆಚಾರ್ಯ ಕೂಲಿ ಕೆಲಸ ಮಾಡುತ್ತಿದ್ದು, ದಸರಾ ಸಂದರ್ಭದಲ್ಲಿ ಹೆಣ್ಣು ವೇಷ ಹಾಕುತ್ತಿದ್ದರು. ವಿಪರೀತ ಮದ್ಯದ ಚಟದ ದಾಸರಾಗಿದ್ದ ಇವರು ಯುವಕನೊಬ್ಬನನ್ನು ಲೈಂಗಿಕವಾಗಿ ಬಳಸಿಕೊಂಡು ಕೊಲೆಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ಬಂಧಿತ ಆರೋಪಿ ರಾಜೇಶ್ ಪೂಜಾರಿ ನಗರದ ಲಾಲ್​ಬಾಗ್​ನಲ್ಲಿರುವ ಬಾರ್​ನಲ್ಲಿ ಕೆಲಸಗಾರನಾಗಿದ್ದ. ಈತನನ್ನು ವೃದ್ಧ ಜಯಾನಂದ ಆಚಾರ್ಯ ಸಲಿಂಗಕಾಮದ ಉದ್ದೇಶಕ್ಕೆಂದು ಅಕ್ಟೋಬರ್​ 7, 8 ರಂದು ಬಳಸಿಕೊಂಡಿದ್ದರು. ಬಳಿಕ ಹಣ ನೀಡುವುದಾಗಿ ಹೇಳಿದ್ದರಂತೆ. ಆದರೆ, ಸಲಿಂಗಕಾಮದ ಬಳಿಕ 300 ರೂ. ಕೊಡಲು ಜಯಾನಂದ ಆಚಾರ್ಯ ಸತಾಯಿಸಿದ್ದರಂತೆ.

ಇದರಿಂದ ಕೋಪಗೊಂಡ ಯುವಕ ರಾಜೇಶ್ ಪೂಜಾರಿ ಹಗ್ಗವೊಂದರಿಂದ ಜಯಾನಂದ ಆಚಾರ್ಯ ಅವರ ಕತ್ತು ಬಿಗಿದು ಕೊಲೆಗೈದಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕಾವೂರು ಠಾಣಾ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

error: Content is protected !!