ಬಸವಕಲ್ಯಾಣ : ತಾಲೂಕಿನ ಘಾಟಹಿಪ್ಪರಗಾದಲ್ಲಿ ಸೋಯಾ ಬಣವಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಲಕ್ಷಾಂತರ ರೂ . ಮೌಲ್ಯದ ಸೋಯಾ ಹಾನಿಗೀಡಾಗಿದೆ . ಗ್ರಾಮದ ಸಂಜುಕುಮಾರ ಮಾಲಿ ಪಾಟೀಲ್ ಎನ್ನುವರ ಜಮೀನಿನಲ್ಲಿ ರಾಶಿ ಮಾಡಲು ಕಟಾವು ಮಾಡಿ ಇಟ್ಟಿದ್ದ ಬಣವಿಗೆ ಗುರುವಾರ ಮಧ್ಯ ರಾತ್ರಿ ವೇಳೆಯಲ್ಲಿ ಬೆಂಕಿ ಹೊತ್ತಿಕೊಂಡು ಸುಮಾರು 5 ಲಕ್ಷ ರೂ ಮೌಲ್ಯದ ಸೋಯಾ ಹಾನಿ ಆಗಿದೆ ಎಂದು ಅಂದಾಜಿಸಲಾಗಿದೆ . ಸುಮಾರು 9 ಎಕರೆಯಲ್ಲಿ ಬೆಳೆದ ಸೋಯಾ ರಾಶಿ ಮಾಡುವುದಕ್ಕಾಗಿ ಕಟಾವು ಮಾಡಿ ಇಡಲಾಗಿತ್ತು . ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಭೇಟಿ ನೀಡಿ , ಬೆಂಕಿ ನಂದಿಸಲು ಪ್ರಯತ್ನಿಸಿದರೂ ಅದಾಗಲೇ ಸೋಯಾ ಸುಟ್ಟಿತ್ತು . ಈ ಕುರಿತು ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ . ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು . ಸಲಗರ ಭೇಟಿ : ಘಟನೆ ಹಿನ್ನೆಲೆಯಲ್ಲಿ ಶಾಸಕ ಶರಣು ಸಲಗರ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು . ಹಾನಿಗೆ ಸರ್ಕಾರದಿಂದ ಸಾಧ್ಯವಿರುವ ಪರಿಹಾರ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು . ಘಾಟಹಿಪ್ಪರಗಾದಲ್ಲಿ ಸೋಯಾ ಬಣವಿಗೆಗೆ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂ ಮೌಲ್ಯದ ಸೋಯಾ ಹಾನಿಗೀಡಾದ ಹಿನ್ನೆಲೆಯಲ್ಲಿ ಶಾಸಕ ಶರಣು ಸಲಗರ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು . ರೈತ ಸಂಜುಕುಮಾರ ಮಾಲಿಪಾಟೀಲ್ , ಪ್ರಮುಖರಾದ ಸುಧೀರ ಕಾಡಾದಿ , ಶಾಂತವಿಜಯ ಪಾಟೀಲ್ , ಮಹಾದೇವ ಪೂಜಾರಿ , ಷಣ್ಮುಖಯ್ಯ ಸ್ವಾಮಿ ಇತರರಿದ್ದರು .