ಉತ್ತರ ಪ್ರದೇಶ ರಾಜಧಾನಿ ಲಕ್ನೋನಲ್ಲಿ ಶಿಕ್ಷಕಿಯೊಬ್ಬರು ತಮ್ಮ ವಿದ್ಯಾರ್ಥಿಗಳಿಗೆ ಮನೆ ಪಾಠ ನೀಡಿ ವಾಪಾಸ್ ಆಟೋದಲ್ಲಿ ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಅವರ ಮೇಲೆ ಚಾಲಕ ಸೇರಿದಂತೆ ಮತ್ತೊಬ್ಬ ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ನಡೆದಿದೆ.
ಶನಿವಾರದಂದು ಈ ಘಟನೆ ನಡೆದಿದ್ದು, ಶಿಕ್ಷಕಿ ಆಟೋ ಏರಿದ ವೇಳೆ ಚಾಲಕನ ಜೊತೆ ಆಕಾಶ್ ತಿವಾರಿ ಎಂಬಾತನೂ ಸಹ ಇದ್ದನೆನ್ನಲಾಗಿದೆ. ಇಬ್ಬರೂ ಸೇರಿ ಶಿಕ್ಷಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ. ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಶಿಕ್ಷಕಿಯನ್ನು ರಸ್ತೆಯಲ್ಲೇ ಬಿಟ್ಟು ಹೋಗಿದ್ದು, ಅಂದು ರಾತ್ರಿಯೇ ಆರೋಪಿಗಳ ವಿರುದ್ಧ ದೂರು ದಾಖಲಿಸಲು ಶಿಕ್ಷಕಿ ಮೂರ್ನಾಲ್ಕು ಠಾಣೆಗಳಿಗೆ ಹೋದರೂ ಸೂಕ್ತ ಪ್ರತಿಕ್ರಿಯೆ ಸಿಕ್ಕಿಲ್ಲ. ನಂತರ ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯ ಮಾಹಿತಿ ವೈರಲ್ ಆಗಿದ್ದು ಬಳಿಕ ಎಚ್ಚೆತ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಇದೀಗ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಪೊಲೀಸ್ ಔಟ್ ಸ್ಟೇಷನ್ ಉಸ್ತುವಾರಿ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದ್ದು, ಉಳಿದ ಮೂರು ಪೊಲೀಸ್ ಠಾಣೆಗಳ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ. ಅಲ್ಲದೆ ಆರೋಪಿ ಆಕಾಶ್ ತಿವಾರಿ ಎಂಬಾತನನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಆಟೋ ಚಾಲಕನ ಪತ್ತೆಗೆ ಬಲೆ ಬೀಸಲಾಗಿದೆ.