ಅಥಣಿ: ಅಥಣಿ ತಾಲೂಕಿನ ಗಡಿಭಾಗಗಳಲ್ಲಿ ಅಕ್ರಮವಾಗಿ ಅಕ್ಕಿ ಸಾಗಾಟವಾಗುತ್ತಿದೆ. ರೇಶನ್ ಶುರುವಾದ್ರೆ ಸಾಕು ದಂಧೆಕೋರರು ಫುಲ್ ಆ್ಯಕ್ಟಿವ್ ಆಗಿ ಬಡವರ ಅಕ್ಕಿಯನ್ನು ಪಕ್ಕದ ಮಹಾರಾಷ್ಟ್ರದ ಪಾಲು ಮಾಡುತ್ತಿದ್ದಾರೆ. ಈ ದಂಧೆಯನ್ನು ತಡೆಯಬೇಕಿದ್ದ ಪೋಲಿಸ್ ಇಲಾಖೆ ವಿಫಲವಾಗಿದ್ದರಿಂದ ಸ್ಥಳೀಯರೇ ಸಾಗಾಟ ವಾಹನ ತಡೆದ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಾಮತೀರ್ಥ, ಕೋಹಳ್ಳಿ ಜಂಬಗಿ ಮಾರ್ಗವಾಗಿ ಕಾಳ ಸಂತೆಗೆ ಅನ್ನಭಾಗ್ಯದ ಅಕ್ಕಿಯನ್ನು ಬಡವರಿಂದ ಕಡಿಮೆ ಹಣಕ್ಕೆ ಖರೀದಿ ಮಾಡಿ ಮಹಾರಾಷ್ಟ್ರಕ್ಕೆ ರವಾನೆ ಮಾಡುತ್ತಿದ್ದಾರೆ ಈ ಕಳ್ಳರು.
ಬಡವರಿಂದ ಖರೀದಿಸಿದ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿ, ಪಕ್ಕದ ಮಹಾರಾಷ್ಟ್ರಕ್ಕೆ ಸಾಗಾಟ ಮಾಡುವ ಜಾಲ ತಾಲೂಕಿನಲ್ಲಿ ಸಕ್ರೀಯವಾಗಿದೆ, ಈ ಜಾಲನೋಡಿ ಬೇಸತ್ತ ಸ್ಥಳೀಯರೇ ಖುದ್ದಾಗಿ ಅಕ್ರಮ ಸಾಗಾಟನೆಯನ್ನು ತಡೆದು ಪ್ರಶ್ನೆ ಮಾಡಿದ ವಿಡಿಯೋ ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ಲಾಗುತ್ತಿವೆ.
ನಿರಂತರವಾಗಿ ಗಡಿ ಭಾಗದಲ್ಲಿ ರಾಜಾ ರೋಷವಾಗಿ ಅನ್ನಭಾಗ್ಯ ಅಕ್ಕಿ ಸಾಗಾಟವಾಗುತ್ತಿದ್ದರೂ ಕೂಡ ಆಹಾರ ಇಲಾಖೆ ಅಧಿಕಾರಿಗಳು ಮತ್ತು ಅಥಣಿ ಹಾಗೂ ಐಗಳಿ ಪೋಲಿಸ್ ಠಾಣೆಯ ಪೋಲಿಸರು ಕಣ್ಣು ಮುಚ್ಚಿ ಕುಳಿತಿದ್ದಾರೆ, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.