ರಾಮನಗರ ಮೂಲದವರಾದ ಶಿವಪ್ಪ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕು ದರಸಗುಪ್ಪೆ ಗ್ರಾಮದಲ್ಲಿ ನೆಲೆಸಿದ್ದರು. ಚಾಮರಾಜನಗರ ಬೀದರ್ ರಾಷ್ಟ್ರೀಯ ಹೆದ್ದಾರಿ ಸಮೀಪವಿದ್ದ ತಮ್ಮ ಮನೆಯಲ್ಲಿಯೇ ಜೀವನೋಪಾಯಕ್ಕೆ ಸಣ್ಣ ಟೀ ಅಂಗಡಿ ಪ್ರಾರಂಭಿಸಿದರು. ಶುಚಿ ಮತ್ತು ರುಚಿಗೆ ಖ್ಯಾತರಾಗಿದ್ದ ಶಿವಪ್ಪ ಅವರ ಹೋಟೆಲ್ನಲ್ಲಿ ಟೀ ಕುಡಿಯಲು ಜನ ತಂಡ ತಂಡವಾಗಿ ಆಗಮಿಸುತ್ತಿದ್ದರು. ನಂತರ ಸಣ್ಣದಾಗಿ ಬೆಳಗಿನ ಉಪಹಾರ ಇಡ್ಲಿ ಮಾರಲು ಪ್ರಾರಂಭಿಸಿದರು. ನೋಡ ನೋಡುತ್ತಿದ್ದಂತೆಯೇ ಅವರ ಇಡ್ಲಿ ಬೆಣ್ಣೆ ಇಡ್ಲಿ ಎಂದೇ ಜನಪ್ರಿಯವಾಯಿತು. ಇವರು ಮಾಡುವ ಇಡ್ಲಿಗೆ ಜನರು ಗಂಟೆ ಗಟ್ಟಲೇ ಕಾಯುವಂತಾಯಿತು.
ಶ್ರೀರಂಗಪಟ್ಟಣ-ಬೀದರ್ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಈ ಪುಟ್ಟ ಹೋಟೆಲ್ ದಕ್ಷಿಣ ಭಾರತದಲ್ಲಿ ಹೆಸರು ವಾಸಿಯಾಗಿತ್ತು. ಹೋಟೆಲ್ ಗೆ ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಯ ಪ್ರವಾಸಿಗರು ಇಡ್ಲಿ ತಿನ್ನಲು ಆಗಮಿಸುತ್ತಿದ್ದರು.
ನಟರಾದ ಪ್ರಕಾಶ್ ರೈ ಹಾಗೂ ಸಿಹಿಕಹಿ ಚಂದ್ರು ಅವರು ತಮ್ಮ ಕಾರ್ಯಕ್ರಮಕ್ಕಾಗಿ ಆಗಮಿಸಿ ಇವರ ಇಡ್ಲಿ ಸವಿದು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಶಿವಪ್ಪ ಸ್ಕೂಟರ್ ನಲ್ಲಿ ರಾಮನಗರಕ್ಕೆ ಹೋಗುತ್ತಿದ್ದಾಗ ರಸ್ತೆ ಮಧ್ಯೆ ನಾಯಿ ಅಡ್ಡ ಬಂದು ಸ್ಕೂಟರ್ ನಿಂದ ಕೆಳಕ್ಕೆ ಬಿದ್ದು ಗಾಯಗೊಂಡಿದ್ದರು.
ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿ ನಂತರ ಮನೆಗೆ ಕರೆತರಲಾಗಿತ್ತು.
ಗುರುವಾರ ಮಧ್ಯರಾತ್ರಿ ತೀವ್ರ ನೋವಿನಿಂದ ನರಳುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಪತ್ನಿ, ಪುತ್ರ ಸೇರಿದಂತೆ ಸಾವಿರಾರು ಮಂದಿ ಇಡ್ಲಿ ಪ್ರಿಯರನ್ನು ಅಗಲಿದ್ದಾರೆ. ಶಿವಪ್ಪ ಅವರ ಅಂತ್ಯಕ್ರಿಯೆ ದರಸಗುಪ್ಪೆ ಗ್ರಾಮದ ಬಳಿ ನಡೆಯಲಿದೆ.