ಬಿಗ್ ಬಾಸ್ ಕನ್ನಡದ ಸೀಸನ್ 9ರ ನಾಲ್ಕನೇ ವಾರದ ನಾಲ್ಕನೇ ದಿನ ಮನೆಯ ಸದಸ್ಯರಿಗೆ ಸಾಲು ಸಾಲು ಟಾಸ್ಕ್‌ಗಳನ್ನು ನೀಡಿದ್ದರು ಬಿಗ್ ಬಾಸ್.
ಅದರಲ್ಲಿ ಮೊದಲನೇ ಟಾಸ್ಕ್ ರಾತ್ರಿ ಇಡೀ ಲೈಟ್ ಸ್ವಿಚನ್ನು ಒತ್ತಿ ಹಿಡಿದುಕೊಂಡು ಇರಬೇಕು.
ಸ್ವಿಚ್ ಬಿಟ್ಟರೆ ಲೈಟ್ ಆಫ್ ಆಗಿ ಅವರು ಹೊರಬೇಕಾಗುತ್ತದೆ ಎಂಬ ನಿಯಮವಿತ್ತು. ಈ ಟಾಸ್ಕ್‌ನಲ್ಲಿ ರೂಪೇಶ್ ರಾಜಣ್ಣ ನೇತೃತ್ವದ ಕಾಮನಬಿಲ್ಲು ತಂಡ ಗೆಲುವು ಸಾಧಿಸಿತು. ಸ್ವಿಚ್ ಒತ್ತಿ ಹಿಡಿದು ಕೆಲವರು ರಾತ್ರಿಯಿಡೀ ನಿಂತು ಒದ್ದಾಡಿದರೆ, ಮತ್ತೆ ಕೆಲವರು ಸ್ವಲ್ಪ ಸಮಯಕ್ಕೇ ಕೈಬಿಟ್ಟು ನಿದ್ದೆಗೆ ಜಾರಿದ್ದರು. ಈ ಎಲ್ಲ ಪ್ರಹಸನಗಳ ಮಧ್ಯೆ ಆರ್ಯವರ್ಧನ್ ಅವರು ನಿಂತಲ್ಲೇ ನಿಂತು ಮೂತ್ರ ಮಾಡಿಕೊಂಡಿದ್ದು, ಮನೆಯ ಸದಸ್ಯರನ್ನು ನಗೆಗಡಲಲ್ಲಿ ತೇಲಿಸಿತ್ತು.
ಟಾಸ್ಕ್ ಗೆಲ್ಲಲೇಬೇಕೆಂದು ಹಠದಿಂದ ಸ್ವಿಚ್ ಹಿಡಿದು ನಿಂತಿದ್ದ ಆರ್ಯವರ್ಧನ್ ಪರಿ ಪರಿಯಾಗಿ ಒದ್ದಾಡುತ್ತಿದ್ದರು. ಇದನ್ನು ಗಮನಿಸಿದ ಕಾವ್ಯಶ್ರೀ ಮೂತ್ರ ಮಾಡುವುದಿದ್ದರೆ ಅಲ್ಲೇ ಮಾಡಿಕೊಳ್ಳಿ ಎಂದು ತಮಾಷೆ ಮಾಡಿದರು. ಅದಕ್ಕೆ ಉತ್ತರಿಸಿದ ಆರ್ಯವರ್ಧನ್, ಅದಾಗಲೇ ಆಗಿದೆ ಎಂದು ಹೇಳಿದರು. ಇದಕ್ಕೆ ಮನೆಯ ಸದಸ್ಯರೆಲ್ಲ ಮುಖ ಸಿಂಡರಿಸಿ ಜೋರಾಗಿ ನಕ್ಕುಬಿಟ್ಟರು. ಸಮೀಪದಲ್ಲೇ ಇದ್ದ ವಿನೋದ್ ಗೊಬ್ಬರಗಾಲ, ಗುರುಗಳೇ ಹೊರಗಡೆ ಜನರು ನೋಡುತ್ತಿರುತ್ತಾರೆ ಅವರು ಏನೆಂದುಕೊಳ್ಳುವುದಿಲ್ಲ ನಿಮ್ಮ ಬಗ್ಗೆ ಯೋಚಿಸಿದ್ದೀರಾ? ಎಂದು ಪ್ರಶ್ನಿಸಿದರು.
ಟಾಸ್ಕ್ ಮುಗಿದ ಬಳಿಕ ಮಯೂರಿ ಡ್ರೆಸಿಂಗ್ ಕೊಠಡಿಯಲ್ಲಿ ಈ ಬಗ್ಗೆ ಮಾತನಾಡುತ್ತಿದ್ದರು. ಆರ್ಯವರ್ಧನ್ ಅವರು ಟಾಸ್ಕ್ ವೇಳೆ ಪದೇ ಪದೇ ಹಿಂದೆ ತಿರುಗಿ ನೋಡುತ್ತಿದ್ದರು. ಏನೆಂದು ನಾನು ಗಮನಿಸಿದೆ.. ಆ ದೃಶ್ಯ ಕಂಡು ಗಾಬರಿಯಾದೆ ಎಂದರು. ಜೋರಾಗಿ ನಗುವುದನ್ನು ಕೇಳಿ ಒಳಗೆ ಬಂದ ಆರ್ಯವರ್ಧನ್, ನೀವು ನನ್ನ ಬಗ್ಗೆಯೇ ಮಾತಾಡುತ್ತಿದ್ದೀರಿ ಎಂದು ತಿಳಿದಿದೆ. ಹಾಗೆಲ್ಲ ಆಗಿದ್ದು ನಿಜ ಎಂದು ಒಪ್ಪಿಕೊಂಡರು.