ಬಿ ಬಾಗೇವಾಡಿ: ಕೊಳಚೆ ನೀರಿನ ಕೆಸರು ಗದ್ದೆಯಾದ ಅಂಬಳನೂರ ಗ್ರಾಮದ ಬಸ್ ನಿಲ್ದಾಣ ಹಾಗೂ ಶ್ರೀ ಮಾರುತೇಶ್ವರ ದೇವಾಲಯದ ಆವರಣ. ಅಂಬಳನೂರ ಗ್ರಾಮದ ಪ್ರಮುಖ ಸ್ಥಳವಾದ ಬಸ್ ನಿಲ್ದಾಣ, ಹಾಗೂ ಪಕ್ಕದಲ್ಲಿರುವ ಮಾರುತೇಶ್ವರ ದೇವಾಲಯದ ಆವರಣ ಸಂಪೂರ್ಣ ಕೊಳಚೆ ನೀರಿನಿಂದ ಆವೃತಗೊಂಡೀದೆ. ಊರಿನ ಆರಾಧ್ಯ ದೇವ ಶ್ರೀ ಮಾರುತೇಶ್ವರ ದೇವಾಸ್ಥಾನಕ್ಕೆ ಪ್ರತಿದಿನ ಗ್ರಾಮದ ಭಕ್ತಾಧಿಗಳು ಹಾಗೂ ಸಾವ೯ಜನಿಕರು ದೇವಾಲಯದ ದಶ೯ನಕ್ಕೆ ಹೋಗಬೇಕಾದರೆ ಈ ಕೊಳಚೆ ನೀರು ಮತ್ತು ಕೆಸರಿನಲ್ಲಿಯೇ ತುಳಿದಾಡಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗೋವಾ, ಬೆಂಗಳೂರು, ವಿಜಯಪುರ, ಬಸವನ ಬಾಗೇವಾಡಿ ನಗರಗಳಿಗೆ ಸಂಪರ್ಕಿಸುವ ಸುತ್ತಮುತ್ತಲಿನ ಗ್ರಾಮಗಳಿಗೆ ಕೇಂದ್ರ ಸ್ಥಳವಾಗಿದ್ದು ಇಲ್ಲಿನ ಬಸ್ ನಿಲ್ದಾಣಕ್ಕೆ ಬೇರೆ ಬೇರೆ ಗ್ರಾಮಗಳ ಜನರು ಬಂದು ಇಲ್ಲಿನ ಬಸ್ ನಿಲ್ದಾಣದ ಹತ್ತಿರ ಇರುವ ಮಾರುತೇಶ್ವರ ದೇವಾಲಯದ ಕಂಪೌಂಡ ಗೋಡೆಯ ಮೇಲೆ ತಮ್ಮ ಲಗೇಜುಗಳನ್ನು ಇಟ್ಟುಕೊಂಡು ಬಸ್ ಬರುವವರಿಗೂ ಕುಳಿತು ವಿಶ್ರಾಂತಿ ಪಡೆಯುತ್ತಿದ್ದರು, ಈಗ ಸುಮಾರು ತಿಂಗಳಿನಿಂದ ಈ ಸ್ಥಳದಲ್ಲಿ ಗ್ರಾಮದ ಕೆಲವು ಮನೆಗಳ ಬಟ್ಟೆ ತೊಳೆದ, ಸ್ನಾನ ಮಾಡಿದ ನೀರು ದಿನಂಪ್ರತಿ ಇಲ್ಲಿಯೇ ಬಂದು ಶೇಖರಣೆಗೊಂಡು, ಹೊಲಸು ವಾಸನೆ ಹಾಗೂ ಸೊಳ್ಳೆ, ಕ್ರಿಮಿಕೀಟಗಳ ತಾಣವಾಗಿ ಪ್ರಯಾಣಿಕರು ಹಾಗೂ ಗ್ರಾಮದ ಸಾವ೯ಜನಿಕರು ಕುಳಿತುಕೊಳ್ಳಲು, ಓಡಾಡಲು ಆಗದೆ ಹಿಡಿ ಶಾಪ ಹಾಕುತ್ತಿದರೆ.
ಊರಿನ ಸರ್ಕಾರಿ ಪ್ರಾಥಮಿಕ ಶಾಲೆಯ ಹಿಂದುಗಡೆ, ಸಂಪೂರ್ಣ 2-3 ಅಡಿಯಷ್ಟು ಆಳವಾಗಿ ಕೊಳಚೆ ನೀರು ಮಲ ಮೂತ್ರ ಸೇರಿ ಸಂಪೂರ್ಣ ಪ್ರದೇಶ ಗಬ್ಬೆನ್ನುತಿದೆ, ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಶಾಲೆಯಲ್ಲಿ ಕುಳಿತುಕೊಳ್ಳಲು ಆಗುತ್ತಿಲ್ಲ ಇದೆಲ್ಲದರ ಗೋಳು ಕೇಳುವವರು ಯಾರು ಇಲ್ಲದಂತಾಗಿದೆ. ಇದಕ್ಕೆ ಸಂಬಂಧಿಸಿದ ಗ್ರಾಮ ಪಂಚಾಯಿತಿಯ ಅಭಿವೃದ್ಧಿಯ ಅಧಿಕಾರಿಗಳಿಗೆ ಹಲವಾರು ಬಾರಿ ಪೋನ ಮಾಡಿ ಹಾಗೂ ಅನೇಕ ಸಲ ಆಫೀಸಿಗೆ ಹೋಗಿ ವಿನಂತಿಸಿಕೊಂಡರು ಕ್ಯಾರೆ ಅನ್ನುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಇದರ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸಹ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಸಂಬಂಧಪಟ್ಟ ಮೇಲಾಧಿಕಾರಿಗಳು ಆದಷ್ಟು ಬೇಗ ಗಮನ ಹರಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರು ವಿನಂತಿಸಿದ್ದಾರೆ.