ಎರಡೂವರೆ ವರ್ಷಗಳ ಕೋವಿಡ್ 19 ಕುರಿತಾದ ಸಂಶೋಧನೆಗಳ ಪ್ರಕಾರ, ವಿಜ್ಞಾನಿಗಳು ಕೊರೊನಾ ವೈರಸ್ ದೇಹದಲ್ಲಿನ ಅನೇಕ ಅಂಗಗಳಿಗೆ ಹಾನಿಯನ್ನುಂಟು ಮಾಡುತ್ತೆ ಎಂಬ ವಿಚಾರವನ್ನು ದೃಢೀಕರಿಸಿದ್ದಾರೆ. ಸೇಂಟ್ ಲೂಯಿಸ್ನಲ್ಲಿರುವ ವಾಷಿಂಗ್ಟನ್ ವಿಶ್ವ ವಿದ್ಯಾಲಯದ ಕ್ಲಿನಿಕಲ್ ಎಪಿಡೆಮಿಯಾಲಜಿ ಸೆಂಟರ್ನ ನಿರ್ದೇಶಕ ಡಾ. ಜಿಯಾದ್ ಅಲ್ – ಅಲಿ ನೀಡಿರುವ ಮಾಹಿತಿಯ ಪ್ರಕಾರ ಕೋವಿಡ್ 19 ಸೋಂಕಿಗೆ ಒಳಗಾದ ವ್ಯಕ್ತಿಯು ಬಹು ಬೇಗನೇ ವೃದ್ಧಾಪ್ಯವನ್ನು ಸಮೀಪಿಸುತ್ತಾನೆ ಎಂದು ತಿಳಿದು ಬಂದಿದೆ.
ವಿಜ್ಞಾನಿಗಳ ಅಧ್ಯಯನದ ಪ್ರಕಾರ ಮುಖ್ಯ ಸಂಶೋಧಕ, ಡಾ ಅಲ್-ಅಲಿ ಯುನೈಟೆಡ್ ಸ್ಟೇಟ್ ಆಫ್ ಅಮೆರಿಕಾದ್ಯಂತ ಲಕ್ಷಾಂತರ ಜನರನ್ನು ಸಮೀಕ್ಷೆ ಮಾಡಿದರು. ಸೋಂಕಿತ ರೋಗಿಗಳ ಮೂತ್ರಪಿಂಡಗಳು, ಹೃದಯಗಳು ಹಾಗೂ ಮೆದುಳುಗಳ ಮೇಲೆ ವೈರಸ್ನ ಪರಿಣಾಮವನ್ನು ವಿಜ್ಞಾನಿಗಳು ಗಮನಿಸಿದ್ದಾರೆ. ನಾವು ಅಧ್ಯಯನದ ಸಂದರ್ಭದಲ್ಲಿ ಗಮನಿಸಿದ ವಿಚಾರ ಏನೆಂದರೆ ಕೊರೊನಾ ಸೋಂಕಿಗೆ ಒಳಗಾದ ವ್ಯಕ್ತಿಯು ಮುಂದಿನ ದಿನಗಳಲ್ಲಿ ಮೂತ್ರಪಿಂಡ ಸಂಬಂಧಿ ಕಾಯಿಲೆಯನ್ನು ಅನುಭವಿಸುತ್ತಿದ್ದಾರೆ. ಇದು ಸಾಮಾನ್ಯವಾಗಿ ವಯಸ್ಸಾದವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ ಎಂದು ಅಲ್ ಅಲಿ ಹೇಳಿದ್ದಾರೆ .ಡಾ.ಜಿಯಾದ್ ಅಲ್ ಅಲಿ ಪ್ರಸ್ತುತ ಯುಸಿಎಸ್ಎಫ್ನಲ್ಲಿ ಸಾಂಕ್ರಾಮಿಕ ರೋಗ ತಜ್ಞ ಡಾ. ಮೈಕಲ್ ಪೆಲುಸೊರೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ.