ನೆಲಮಂಗಲ ತಾಲೂಕಿನ ಭೂಸಂದ್ರ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಗಂಡನ ಕ್ರೌರ್ಯದ ಪರಮಾವಧಿ ಇದು ಎಂದು ಹೇಳಲಾಗಿದೆ.
ಬೆಸ್ಕಾಂ ಉದ್ಯೋಗಿಯಾಗಿರುವ ಕೃಷ್ಣಮೂರ್ತಿ ಎಂಬಾತನೇ ತನ್ನ ಪತ್ನಿ ಶ್ರುತಿ (೨೯)ಯನ್ನು ಕೊಲೆ ಮಾಡಿ ಪರಾರಿಯಾದ ದುಷ್ಟ ಗಂಡ. ಇವರಿಗೆ ಹಲವು ವರ್ಷಗಳ ಹಿಂದೆ ಮದುವೆಯಾಗಿತ್ತು. ಹಿಂದಿನಿಂದಲೂ ಹಣಕ್ಕಾಗಿ ಕಿರುಕುಳ ನಡೆಯುತ್ತಿತ್ತು. ಆದರೆ ಇತ್ತೀಚೆಗೆ ಅದು ವಿಪರೀತಕ್ಕೇರಿ ಹಲ್ಲೆ, ದೌರ್ಜನ್ಯ ಮಿತಿ ಮೀರಿತ್ತು ಎನ್ನಲಾಗಿದೆ.
ಈ ನಡುವೆ ಮಾತಿಗೆ ಮಾತು ಬೆಳೆದಾಗ ಈ ದುಷ್ಟ ಮಾರಕಾಸ್ತ್ರಗಳಿಂದ ಹೆಂಡತಿಗೆ ಬಡಿದಿದ್ದಾನೆ ಮತ್ತು ಆಕೆಗೆ ತೀವ್ರ ಗಾಯವಾಗಿರುವುದನ್ನು ಗಮನಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ನಡುವೆ ಗಾಯಗೊಂಡ ಶ್ರುತಿ ಅಲ್ಲೇ ಪ್ರಾಣ ಕಳೆದುಕೊಂಡಿದ್ದಾಳೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.