ತಂದೆ ಮತ್ತು ಮಲತಾಯಿಯನ್ನು ಕೊಂದುಹಾಕಲು ಗ್ಯಾಂಗ್ಗೆ ‘ಸುಪಾರಿ’ ನೀಡಿದ ವಕೀಲನನ್ನು ದಾಳಿಕೋರರು ಇರಿದು ಹಾಕಿದ ಘಟನೆ ನಡೆದಿದೆ. ಕಳೆದ ವಾರ ಗಂಗಾವತಿಯಲ್ಲಿ ಈ ಘಟನೆ ವರದಿಯಾಗಿದ್ದು, ವಕೀಲರು ಚಾಕು ಇರಿತದಿಂದ ಚೇತರಿಸಿಕೊಂಡ ನಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೂಲತಃ ಕೊಪ್ಪಳ ಜಿಲ್ಲೆಯ 39 ವರ್ಷದ ಯೋಗೀಶ್ ದೇಸಾಯಿ ಎಂಬ ವಕೀಲರು ಬೆಂಗಳೂರಿನ ಇಬ್ಬರು ಸುಪಾರಿ ಕಿಲ್ಲರ್ಗಳಿಗೆ 3 ಲಕ್ಷ ರೂಪಾಯಿ ನೀಡುವುದಾಗಿ ಮಾತು ಕೊಟ್ಟು ತಮ್ಮ ತಂದೆ ವಾಸಿಸುವ ಕೊಪ್ಪಳಕ್ಕೆ ಪ್ರಯಾಣಿಸಲು ವ್ಯವಸ್ಥೆ ಮಾಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಯೋಗೇಶ್ ತನ್ನ ಸೋದರ ಮಾವನ ಜೊತೆ ಸೇರಿ ತನ್ನ ತಂದೆ ಮತ್ತು ಮಲತಾಯಿಯನ್ನು ಕೊಲ್ಲಲು ಯೋಜನೆ ರೂಪಿಸಿದ್ದ. ಆರೋಪಿಯು ಬೆಂಗಳೂರಿನ ಯಶವಂತಪುರದಲ್ಲಿ ತನ್ನ ಸಹೋದರಿ ಮತ್ತು ಸೋದರ ಮಾವನ ಜೊತೆ ವಾಸಿಸುತ್ತಿದ್ದಾನೆ. ದೇಸಾಯಿ ತನ್ನ ತಂದೆಯನ್ನು ಕೊಲ್ಲಲು ಮೊಹಮ್ಮದ್ ಫಯಾಜ್ ಮತ್ತು ಸೋಹನ್ಗೆ ಸುಪಾರಿ ವಹಿಸಿದ್ದನು.
ನವೆಂಬರ್ 18 ರಂದು ಯೋಗೇಶ್ ತನ್ನ ತಂದೆಯ ಮನೆ ಮತ್ತು ಮಲತಾಯಿಯ ಮನೆಯನ್ನು ತೋರಿಸಲು ದುಷ್ಕರ್ಮಿಗಳನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿದ್ದ. ಇದೇ ವೇಳೆ ಯೋಗೇಶ್ ಭರವಸೆ ನೀಡಿದ್ದಕ್ಕಿಂತ ಕಡಿಮೆ ಹಣ ನೀಡಿರುವುದು ಗೊತ್ತಾಗುತ್ತಿದ್ದಂತೆಯೇ ಹಲ್ಲೆಕೋರರು ಯೋಗೇಶ್ ಜತೆ ಕಾರಿನಲ್ಲಿ ವಾಗ್ವಾದ ನಡೆಸಿದ್ದಾರೆ. ಸೋಹನ್ ಕಾರು ಚಲಾಯಿಸುತ್ತಿದ್ದು, ಯೋಗೇಶ್ ಮುಂದಿನ ಸೀಟಿನಲ್ಲಿ ಕುಳಿತಿದ್ದನು. ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಫಯಾಜ್ ಯೋಗೇಶನನ್ನು ಚಾಕುವಿನಿಂದ ಇರಿದು ಕಾರಿನಿಂದ ತಳ್ಳಿದ್ದಾನೆ ಎನ್ನಲಾಗಿದೆ.
ಒಬ್ಬ ವ್ಯಕ್ತಿಯನ್ನು ಕಾರಿನಿಂದ ಹೊರಗೆ ತಳ್ಳಿದ ಬಗ್ಗೆ ನಮಗೆ ಸಂದೇಶ ಬಂದಿದ್ದು, ರಕ್ತಸ್ರಾವಗೊಂಡಿದ್ದನು. ಗಂಗಾವತಿಯ ಜಯನಗರದಲ್ಲಿ ಘಟನೆ ವರದಿಯಾಗಿದೆ. ಸ್ಥಳಕ್ಕೆ ಭೇಟಿ ನೀಡಿದಾಗ, ವಕೀಲ ಗಂಭೀರ ಗೊಯಗೊಂಡಿದ್ದ, ಆತನನ್ನು ಆಸ್ಪತ್ರೆಗೆ ಸೇರಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಯೋಗೀಶ್ನನ್ನು ವಿಚಾರಣೆಗೆ ಒಳಪಡಿಸಿದಾಗ ಸುಳ್ಳು ಹೇಳಿದ್ದಾನೆ.
ಆದಾಗ್ಯೂ, ಪೊಲೀಸರು ಮತ್ತಷ್ಟು ವಿಚಾರಣೆಗೊಳಪಡಿಸಿದಾಗ ಸುಪಾರಿ ನೀಡಿರುವ ವಿಚಾರ ಬೆಳಕಿಗೆ ಬಂತು. ಆರೋಪಿಗಳಿಗೆ ಕರೆ ಮಾಡಿದಾಗ ಅರ್ಧದಷ್ಟು ಹಣ ನೀಡಿದ್ದಕ್ಕೆ ಬೆದರಿಸಿ ಇನ್ನರ್ಧ ಹಣ ನೀಡುವಂತೆ ಒತ್ತಾಯಿಸಿದರು. ಬಳಿಕ ಯೋಗೇಶ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.