ಮುಂಡಗೋಡ: ತಾಲೂಕಿನ ಚಿಗಳ್ಳಿ ಗ್ರಾಮದ ಗುರು ವೀರಯೋಗೆಂದ್ರ ಮಹಾಸ್ವಾಮಿಯ ದೇವಸ್ಥಾನದ ನೀರಿನ ಹೊಂಡದಲ್ಲಿ ಪ್ರತಿ ವರ್ಷದಂತೆ ತೆಪ್ಪದ ತೇರು ಉತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.
ಪ್ರತಿ ವರ್ಷ ಛಟ್ಟಿ ಅಮವಾಸ್ಯೆಯಂದು ತೆಪ್ಪದ ರಥೋತ್ಸವ ನಡೆಯುತ್ತದೆ.ಸೂರ್ಯ ಪಶ್ಚಿಮಾಭಿಮುಖವಾಗಿ ಇಳಿಯುತ್ತಿದ್ದಂತೆ, ರಥೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ತೆಪ್ಪದ ರಥವು ಹೊಂಡದಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದಂತೆ ಹೊಂಡದ ಸುತ್ತಲೂ ನಿಂತಿದ್ದ ಭಕ್ತರು ರಥಕ್ಕೆ ಬಾಳೆಹಣ್ಣು,ಉತ್ತತ್ತಿ ಎಸೆದು ಭಕ್ತಿಯ ಪರಾಕಾಷ್ಠೆಯನ್ನು ಮೆರೆದರು.
ಗುರು ವೀರಯೋಗೇಂದ್ರ ಅವರು ಮಹಾನ್ ತ್ಯಾಗಿ, ಹಠಯೋಗಿಯಾಗಿದ್ದು, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಮನದ ಆರಾಧ್ಯ ದೈವವಾಗಿದ್ದಾರೆ. ಛಟ್ಟಿ ಅಮವಾಸ್ಯೆಯಂದು ದೇವಸ್ಥಾನ ಪಕ್ಕದ ಕಲ್ಯಾಣಿಯಲ್ಲಿ ತೆಪ್ಪದ ರಥೋತ್ಸವ ನಡೆಯುತ್ತದೆ. ರಥೋತ್ಸವದ ನಂತರ ದೀಪೋತ್ಸವ ಕಾರ್ಯಕ್ರಮವು ಸಹ ನಡೆಯುತ್ತದೆ ಎಂದು ಗ್ರಾಮದ ಶಿಕ್ಷಕರಾದ ಶ್ರೀ ಬಸವರಾಜ ಬೆಂಡ್ಲಗಟ್ಟಿ ಹೇಳಿದರು. ಚಿಗಳ್ಳಿ, ಕಾವಲಕೊಪ್ಪ ಮುಡಸಾಲಿ,ಅಜ್ಜಳ್ಳಿ ಸೇರಿದಂತೆ ಅಕ್ಕ ಪಕ್ಕದ ಗ್ರಾಮದ ಜನರು ಭಾಗವಹಿಸಿದ್ದರು.
ಶ್ರೀ ಸ.ಸ. ಕಲ್ಲೇಶ್ವರ ಮಹಾರಾಜರ ಆಶ್ರಮದಲ್ಲಿ ಶ್ರೀ ಶ್ರೀ ಷ.ಬ್ರ. ಶ್ರೀ ಗುರುನಂಜೇಶ್ವರ ಶಿವಾಚಾರ್ಯರು, ಗುರುನಂಜೇಶ್ವರ ಮಠ, ಕೂಡಲ ಇವರಿಂದ ದೀಪೋತ್ಸವ ಕಾರ್ಯಕ್ರಮ ಚಾಲನೆಗೊಂಡು ಶ್ರೀ ದೀಪನಾಥೇಶ್ವರ, ಈಶ್ವರ ದೇವಸ್ಥಾನ, ಶ್ರೀ ಫಕ್ಕೀರೇಶ್ವರ ದೇವಸ್ಥಾನ ಹಾಗೂ ಶ್ರೀ ವಿರಯೋಗೇಂದ್ರಸ್ವಾಮಿಗಳ ದೇವಸ್ಥಾನ ಚೌಕಿಮಠದ ವರೆಗೆ ದೀಪೋತ್ಸವವು ಜರುಗಿ ನಂತರ ಶ್ರೀ ವೀರಯೋಗೇಂದ್ರ ಸ್ವಾಮಿಯ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ಜರಗಿತು.
ವರದಿ:ಮಂಜುನಾಥ ಹರಿಜನ.