ಕೊಪ್ಪಳದಲ್ಲಿ ಮತಾಂತರ ಭೂತ ವಕ್ಕರಿಸಿದೆ. ಅತ್ಯಾಚಾರ ಬೆದರಿಕೆ, ಆಮಿಷವೊಡ್ಡಿ ಬಲವಂತವಾಗಿ ಕುಟುಂಬವೊಂದನ್ನು ಮತಾಂತರ ಮಾಡಿರುವ ಆರೋಪ ಕೇಳಿ ಬಂದಿದ್ದು, ಮೂವರ ವಿರುದ್ಧ ಕಾರಟಗಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರಟಗಿ ಪಟ್ಟಣದ ರಾಮನಗರದ ನಿವಾಸಿ ಶಂಕರ್ ಎಂಬುವವರು ಇಲ್ಲಿನ ಗ್ರೇಸ್ ಪ್ರಾರ್ಥನಾ ಮಂದಿರದ ಪಾಸ್ಟರ್ ಸತ್ಯನಾರಾಯಣ ಅಲಿಯಾಸ್ ಸ್ಯಾಮುವೆಲ್, ಶಿವಮ್ಮ ಅಲಿಯಾಸ್ ಸಾರಾ ಹಾಗೂ ಚಿರಂಜೀವಿ ಅಲಿಯಾಸ್ ಡ್ಯಾನಿಯೆಲ್ ಎಂಬುವವರ ಮೇಲೆ ಕಾರಟಗಿ ಪೊಲೀಸ್ ಠಾಣೆಯಲ್ಲಿ ಡಿಸೆಂಬರ್ 9 ರಂದು ದೂರು ದಾಖಲಿಸಿದ್ದರು.
ಮತಾಂತರಿಗಳು ಮನೆಗೆ ನುಗ್ಗಿ ಬಲವಂತದಿಂದ ಮತಾಂತರ ಮಾಡಿದ್ದಲ್ಲದೆ, ಒಂದು ವೇಳೆ ಹಿಂದು ಧರ್ಮಕ್ಕೆ ಮರಳಿದರೆ ನಾನೇ ನಿಮ್ಮನ್ನು ಸಾಯಿಸುತ್ತೇನೆ’. ‘ನಿಮ್ಮ ಮಕ್ಕಳನ್ನು ಅಪಹರಿಸಿ ಅತ್ಯಾಚಾರ ಮಾಡಿಸುತ್ತೇನೆ’ ಎಂದು ಸತ್ಯನಾರಾಯಣ ಅಲಿಯಾಸ್ ಸ್ಯಾಮುವೆಲ್ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತ ಶಂಕರ್ ಕಾರಟಗಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರು ದಾಖಲಿಸಿರುವ ಶಂಕರ್ ಹಾಗೂ ಆರೋಪ ಹೊತ್ತಿರುವ ಸ್ಯಾಮುವೆಲ್ ಸಂಬಂಧಿಕರಾಗಿದ್ದಾರೆ.
ಫೆಬ್ರವರಿ 6ರಂದು ಆರೋಪಿತರ ಮನೆಯಲ್ಲಿದ್ದ ಹಿಂದು ದೇವರ ಫೋಟೊಗಳನ್ನು ನಾಲೆಗೆ ಎಸೆದು ನಮ್ಮನ್ನು ಮತಾಂತರ ಮಾಡಿದರು. ಕ್ರಿಶ್ಚಿಯನ್ ಧರ್ಮವನ್ನು ಪಾಲಿಸದಿದ್ದರೆ ದೆವ್ವ, ಪಿಶಾಚಿಗಳಾಗಿ ಅಲೆಯುತ್ತೀರಿ. ಮತ್ತೆ ವಾಪಸ್ ಹಿಂದು ಧರ್ಮಕ್ಕೆ ಹೋಗದೆ ಕ್ರಿಶ್ಚಿಯನ್ ಧರ್ಮ ಪಾಲಿಸುವಂತೆ ಒತ್ತಡ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.