ಕರ್ನಾಟಕಕ್ಕೆ 4ನೇ ಶ್ರೇಣಿ ಪಡೆದು ಎನ್ .ಗಾಯತ್ರಿ ರವರು  ಕರ್ನಾಟಕ ಉಚ್ಚ ನ್ಯಾಯಾಲಯ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ನೇರ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿತ್ತು. ಇದೀಗ ಫಲಿತಾಂಶ ಪ್ರಕಟಗೊಂಡಿದ್ದು ತಳವರ್ಗ ಕಡು ಬಡತನದ ಹಿನ್ನಲೆಯಿಂದ ಬಂದ ಎನ್. ಗಾಯತ್ರಿ ರವರು ಆಯ್ಕೆಯಾಗಿದ್ದಾರೆ.

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಕಾರಹಳ್ಳಿ ಗ್ರಾಮದ ಎನ್. ಗಾಯತ್ರಿ ರವರು 2021ರಲ್ಲಿ ತಮ್ಮ ಕಾನೂನು ಪದವಿ ಪಡೆದು ತಾವು ಕಂಡ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಸತತ ಮತ್ತು ಸರಿಯಾದ ಪ್ರಯತ್ನದ ಮೂಲಕ 25ನೇ ವಯಸ್ಸಿಗೆ ಸಿವಿಲ್ ನ್ಯಾಯಾಧೀಶೆ ಹುದ್ದೆಗೆ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದು, ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅತ್ಯಂತ ತಳಸಮುದಾಯ ಮತ್ತು ಬಡತನದ ಹಿನ್ನೆಲೆಯಿಂದ ಬಂದ ಎನ್. ಗಾಯತ್ರಿ ರವರು ಬಂಗಾರಪೇಟೆ ತಾಲ್ಲೂಕಿನ ಕಾರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಾಲಕಿಯರ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪಡೆದು ನಂತರ ಕೆ.ಜಿ.ಎಫ್ ನ ಕೆಂಗಲ್ ಹನುಮಂತಯ್ಯ ಲಾ ಕಾಲೇಜಿನಲ್ಲಿ ಕಾನೂನು ಪದವಿಯನ್ನು ಕರ್ನಾಟಕಕ್ಕೆ 4ನೇ ಸ್ಥಾನ ಪಡೆದುಕೊಂಡಿದ್ದಾರೆ.
ನಾರಾಯಣಸ್ವಾಮಿ, ವೆಂಕಟಲಕ್ಷ್ಮೀ ಅವರ ಏಕೈಕ ಪುತ್ರಿ ಮೂವರು ಸಹೋದರರಿದ್ದಾರೆ. ತೀರಾ ಬಡತನದಲ್ಲಿ ಬೆಳೆದ ಗಾಯತ್ರಿ ಮೊದಲಿನಿಂದಲೂ ಸಾಮಾಜಿಕ ಕಾಳಜಿ, ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಹೊಂದಿದ್ದರು. ಇದೀಗ ಯಶಸ್ವಿಯಾಗಿದ್ದು, ತಂದೆ, ತಾಯಿ, ಸಹಪಾಠಿಗಳು, ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಸಿವಿಲ್ ನ್ಯಾಯಾಧೀಶೆ ಹುದ್ದೆಗೆ ಆಯ್ಕೆಯಾಗಿರುವ ಗಾಯತ್ರಿ ಅವರು, “ಎರಡನೇ ಪ್ರಯತ್ನದಲ್ಲಿ ಸಿವಿಲ್ ನ್ಯಾಯಾಧೀಶೆ ಹುದ್ದೆಗೆ ಆಯ್ಕೆಯಾಗಿರುವುದು ತುಂಬಾ ಸಂತಸ ತಂದಿದೆ ನನಗಿಂತ ನಮ್ಮ ಕುಟುಂಬಸ್ಥರು ಹೆಚ್ಚು ಖುಷಿಯಾಗಿದ್ದಾರೆ ಎಂದು ಸಂತಸ ಹಂಚಿಕೊಂಡರು.

ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಸ್ಫೂರ್ತಿ.

“ನಮ್ಮಮನೆಯಲ್ಲಿ ಉನ್ನತ ಶಿಕ್ಷಣ ಪಡೆದ ಮೊದಲ ಮಹಿಳೆ ನಾನು, ಸರ್ಕಾರಿ ನೌಕರಿ ಪಡೆದುಕೊಂಡದ್ದು, ಅದರಲ್ಲೂ ಸಿವಿಲ್ ನ್ಯಾಯಾಧೀಶೆ ಹುದ್ದೆಗೆ ಆಯ್ಕೆಯಾಗಿರುವುದರಲ್ಲಿ ಮೊದಲಿಗಳು. ತಳ ಸಮುದಾಯಗಳ ತಲ್ಲಣಗಳಿಗೆ ಮಿಡಿಯಲು ಪ್ರಯತ್ನಿಸುತ್ತೇನೆ. ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನನ್ನ ಮಿತಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವೆ. ನನ್ನೆಲ್ಲ ಸಾಧನೆಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಸ್ಫೂರ್ತಿಯಾಗಿದ್ದು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವೆ” ಎಂದು ಹೇಳಿದರು.
ವರದಿ – ರೋಶನ್

error: Content is protected !!