ಬೆಳಗಾವಿ ನಗರ ಪೊಲೀಸ್ ಆಯುಕ್ತಾಲಯದ ವೈರ್‌ಲೆಸ್ ಠಾಣೆಯ ಪಿಎಸ್‌ಐ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ, ಕಾಲೇಜು ವಿದ್ಯಾರ್ಥಿನಿಯೊಬ್ಬರು ಗುರುವಾರ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನ್ನನ್ನೇ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಮಾಡಿರುವ ಪಿಎಸ್‌ಐ ಲಾಲ್‌ಸಾಬ್ ಎಂಬುವರು ಇದೇ ಫೆಬ್ರವರಿ 10ರಂದು ಬೇರೆ ಯುವತಿ ಜತೆಗೆ ಮದುವೆಯಾಗಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆಯು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರಿನಲ್ಲಿ ಏನಿದೆ: ಫೇಸ್ಬುಕ್ ಮೆಸೆಂಜರ್ ಮೂಲಕ 2020ರ ಜೂನ್ 16ರಂದು ಪರಿಚಯ ಮಾಡಿಕೊಂಡಿದ್ದ ಪಿಎಸ್‌ಐ, ಪ್ರತಿ ದಿನ ಚಾಟ್ ಮಾಡುತ್ತಾ ಸ್ನೇಹ ಬೆಳೆಸಿದ್ದರು. ಬಳಿಕ ತನನ್ನು ಮದುವೆ ಆಗುವುದಾಗಿ ನಂಬಿಸಿದ್ದರು. ಕೆಲ ದಿನಗಳ ನಂತರ ಬೆಳಗಾವಿಯ ಸುಭಾಷ್ ನಗರದ ತನ್ನ ರೂಮಿಗೆ ಕರೆದೊಯ್ದು ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಕೋರಿದ್ದರು. ನಾನು ಒಪ್ಪದೇ ಇದ್ದಾಗ ಒತ್ತಾಯ ಪೂರ್ವಕವಾಗಿ ಲೈಂಗಿಕ ದೌರ್ಜನ್ಯ ಎಸಗಿ ಮದುವೆ ಮಾಡಿಕೊಳ್ಳುವ ಭರವಸೆ ಸಹ ನೀಡಿದ್ದರು. ಅಲ್ಲದೇ ಮದುವೆ ಆಗುವ ಭರವಸೆ ನೀಡಿ ಬಾಂಡ್ ಕೂಡ ಬರೆದುಕೊಟ್ಟಿದ್ದರು. ಬಳಿಕ ಬೆಳಗಾವಿಯ ಕೆಲವು ಲಾಡ್ಜ್‌ಗಳಿಗೂ ಕರೆದುಕೊಂಡು ಹೋಗಿ ಲೈಂಗಿಕ ಸಂಪರ್ಕ ಬೆಳೆಸಿದ್ದರು. ಆದರೆ, ಈಗ ಮತ್ತೊಬ್ಬಳೊಂದಗೆ ಮದುವೆ ಆಗಿ ನನಗೆ ಮೋಸ ಮಾಡಿದ್ದಾರೆ.
ನನ್ನನ್ನೇ ಮದುವೆ ಆಗುವುದಾಗಿ ಬಾಂಡ್ ಕೂಡ ಬರೆದುಕೊಟ್ಟಿದ್ದರಿಂದ, ಅದರ ಭರವಸೆ ಮೇಲೆ ನಾನು ಇಷ್ಟು ದಿನ ಸಹಿಸಿಕೊಂಡೆ. ಅಲ್ಲದೇ, ನನ್ನ ಹಾಗೂ ಅವರ ನಡುವಿನ ಸಂಬಂಧದ ಬಗ್ಗೆ ಪೂರ್ಣವಾಗಿ ತಿಳಿಸಿದರೂ ಬೇರೊಬ್ಬ ಯುವತಿ ಅವರನ್ನು ಮದುವೆಯಾದರು. ಈ ಮೂಲಕ ಅವರಿಂದಲೂ ನನಗೆ ಅನ್ಯಾಯವಾಗಿದೆ. ಪಿಎಸ್‌ಐ ಈ ಮೂಲಕ ನನ್ನ ಘನತೆಯ ಬದುಕನ್ನು ಕಿತ್ತುಕೊಂಡಿದ್ದಾರೆ. ಇದರಿಂದ ನಮ್ಮ ಕುಟುಂಬದ ಸದಸ್ಯರ ಮಾನಸಿಕ ನೆಮ್ಮದಿ ಕೂಡ ದೂರ ಮಾಡಿದ್ದಾರೆ. ಇಷ್ಟೆಲ್ಲ ಸಂಕಷ್ಟಕ್ಕೆ ಈಡು ಮಾಡಿದ ಪಿಎಸ್‌ಐ ವಿರುದ್ಧ ಕ್ರಮ ಜರುಗಿಸುವಂತೆ ವಿದ್ಯಾರ್ಥಿನಿಯು ತನ್ನ ದೂರು ಪ್ರತಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಹಾಗೂ ಮದುವೆಯಾಗಲು ಸಹಕರಿಸಿದವರ ವಿರುದವು ಸಹ ಸಂತ್ರಸ್ತೆ ದೂರನ್ನು ದಾಖಲಿಸಿರುತ್ತಾರೆ.