ಈಗಾಗಲೇ ಮದುವೆಯಾಗಿದ್ದ ತನ್ನ ಗೆಳತಿಯನ್ನು ಕೊಲೆಮಾಡಿ, ಆಕೆಯ ದೇಹವನ್ನು ಭಾಗಗಳಾಗಿ ಕತ್ತರಿಸಿ ರಾಜಸ್ಥಾನದ ನಾಗೌರ್ನಲ್ಲಿ ಹಲವಾರು ಸ್ಥಳಗಳಲ್ಲಿ ಎಸೆದಿದ್ದಾನೆ. ಈ ಪ್ರಕರಣವು ದೆಹಲಿಯ ಭೀಕರವಾದ ಶ್ರದ್ಧಾ ವಾಕರ್ ಹತ್ಯೆಯನ್ನು ನೆನಪಿಸುವಂಥದ್ದಾಗಿದೆ. ಆಕೆ ಬಾಲಾಜಿ ಪೊಲೀಸ್ ಠಾಣೆ ವ್ಯಾಪ್ತಿಯ ಬಾಲಾಸರ್ ಗ್ರಾಮದ ವಿವಾಹಿತ ಮಹಿಳೆ. ಜನವರಿ 20 ರಂದು ಮುಂಡಾಸರ್ನಲ್ಲಿರುವ ತನ್ನ ಅತ್ತೆಯ ಮನೆಗೆ ಹೋಗುವುದಾಗಿ ಹೇಳಿ ಮಹಿಳೆ ತನ್ನ ತಾಯಿಯ ಮನೆಯನ್ನು ಬಿಟ್ಟು ಬಂದಿದ್ದಳು. ಆದರೆ, ಗಂಟೆಗಳ ನಂತರ ಆಕೆಯನ್ನು ಸಂಪರ್ಕಿಸಿದಾಗ ಆಕೆಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು.
ಎರಡು ದಿನಗಳ ನಂತರ ಸಂತ್ರಸ್ತೆಯ ಸಂಬಂಧಿಕರು ಪೊಲೀಸರನ್ನು ಸಂಪರ್ಕಿಸಿದರು. ಪೊಲೀಸರು ಹುಡುಕಾಟ ನಡೆಸುತ್ತಿದ್ದಂತೆ ಜನವರಿ 28 ರಂದು ನಾಗೌರ್ ನಗರದ ಮಾಲ್ವಾ ರಸ್ತೆಯಲ್ಲಿರುವ ಕೇಂದ್ರೀಯ ವಿದ್ಯಾಲಯದ ಹಿಂಭಾಗದ ಪೊದೆಗಳಲ್ಲಿ ಮಹಿಳೆಯ ಬಟ್ಟೆ, ಕೂದಲು, ದವಡೆ ಪತ್ತೆಯಾಗಿದೆ. ಸಂತ್ರಸ್ತೆಯ ಉಡುಪುಗಳಲ್ಲಿ ರಕ್ತದ ಕಲೆಗಳಿರುವುದು ದೃಢಪಟ್ಟ ಬಳಿಕ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿ ಆಕೆಯ ಪ್ರಿಯಕರನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದಾಗ, ಮಹಿಳೆ ತನ್ನನ್ನು ಮದುವೆಯಾಗುವಂತೆ ದಿನದಿಂದ ದಿನಕ್ಕೆ ಒತ್ತಡ ಹಾಕುತ್ತಿದ್ದಳು. ಆದ್ದರಿಂದ ಕೊಲೆ ಮಾಡಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿ ಕೊಲೆಯಾದ ಮಹಿಳೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿ ವಿವಿಧ ಸ್ಥಳಗಳಲ್ಲಿ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾನೆ.
ದೇವ್ರ ಗ್ರಾಮದ ಬಾವಿಯಲ್ಲಿ ದೇಹದ ಭಾಗಗಳನ್ನು ಎಸೆದಿರುವುದಾಗಿ ಆರೋಪಿ ತಿಳಿಸಿದ್ದಾನೆ. ಕೊಲೆಯಾದ ಮಹಿಳೆಯ ದೇಹದ ಭಾಗಗಳನ್ನು ಪತ್ತೆಹಚ್ಚಲು ಡ್ರೋನ್ ಕ್ಯಾಮೆರಾಗಳನ್ನು ಸಹ ಬಳಸಲಾಗಿದೆ. ದಿನಗಟ್ಟಲೆ ಹುಡುಕಾಟ ನಡೆಸಿದ ಪೊಲೀಸರು ಶವವನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ನಂತರ ಆರೋಪಿಗಳು ಪೊಲೀಸರನ್ನು ದಾರಿತಪ್ಪಿಸುತ್ತಿರುವುದು ಬೆಳಕಿಗೆ ಬಂದಿದೆ. ಆರೋಪಿಯ ಪಾಲಿಗ್ರಾಫ್ ಪರೀಕ್ಷೆಯನ್ನು ಜೈಪುರದಲ್ಲಿ ನಡೆಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.