ಮದ್ಯವ್ಯಸನಿಯಾಗಿದ್ದ ತಂದೆ ತನ್ನ ಮಗಳ ಮೇಲೆ ಅತ್ಯಾಚಾರವೆಸಗುವುದಾಗಿ ಬೆದರಿಕೆ ಹಾಕಿದ್ದಕ್ಕೆ ಮಹಿಳೆಯೊಬ್ಬರು ತನ್ನ ಪತಿಯನ್ನೇ ಕೊಲೆ ಮಾಡಿರುವ ಘಟನೆ ಝಾನ್ಸಿಯಲ್ಲಿ ನಡೆದಿದೆ. ಕೊಲೆಯಲ್ಲಿ ಭಾಗಿಯಾಗಿರುವ ಆರೋಪಿ ಮಹಿಳೆ ಮತ್ತು ಆಕೆಯ ಮಗಳ ವಿರುದ್ಧ ಐಪಿಸಿ ಸೆಕ್ಷನ್ 304ರ ಕೆಳಗೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಕೆಯ ಪತಿ ಪಾಣಿಪತ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ರಜೆಯ ಮೇಲೆ ಗ್ರಾಮಕ್ಕೆ ಬಂದಿದ್ದ. ‘ನನ್ನ ಪತಿ ಮದುವೆಗೆ ಹಾಜರಾಗಲು ಹೋಗಿ ಕಂಠ ಪೂರ್ತಿ ಕುಡಿದು ಮನೆಗೆ ಮರಳಿದ್ದರು. ನಂತರ ಅವರು ನನ್ನೊಂದಿಗೆ ಜಗಳವಾಡಿ ನನ್ನ ಮೇಲೆ ಹಲ್ಲೆಗೆ ಯತ್ನಿಸಿದರು. ಇದನ್ನು ನೋಡಿದ ನನ್ನ ಹದಿಹರೆಯದ ಮಗಳು ಜಗಳ ನಿಲ್ಲಿಸಲು ಮಧ್ಯಪ್ರವೇಶಿಸಿದ್ದಾಳೆ. ಆಗ ಆಕೆಯ ಮೇಲೆ ಅತ್ಯಾಚಾರ ಮಾಡುವುದಾಗಿ ಪತಿ ಬೆದರಿಕೆ ಹಾಕಿದರು’ ಎಂದು ಮಹಿಳೆ ಆರೋಪಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ತಾಯಿ ಮತ್ತು ಮಗಳು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡ ಪತಿರಾಯ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿಯನ್ನು ಕಾಶೀರಾಮ್ ಎಂದು ಗುರುತಿಸಲಾಗಿದೆ. ಆತನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.