ದೆಹಲಿಯಲ್ಲಿ ಶ್ರದ್ಧಾ ವಾಕರ್ ಹತ್ಯೆಗೈದು ದೇಹವನ್ನು ಕತ್ತರಿಸಿ ರೆಫ್ರಿಜರೇಟರ್‌ನಲ್ಲಿಟ್ಟ ಘಟನೆ ಬೆಳಕಿಗೆ ಬಂದ ಬಳಿಕ ಶವವನ್ನು ಫ್ರೀಡ್ಜರ್‌ನಲ್ಲಿಟ್ಟ ಹಲವು ಹತ್ಯೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದೀಗ ಗುವಾಹಟಿಯಿಂದ ಇಂತಹದ್ದೇ ಒಂದು ಘಟನೆ ವರದಿಯಾಗಿದ್ದು, ಮಹಿಳೆಯೊಬ್ಬಳು ತನ್ನ ಗಂಡ ಮತ್ತು ಅತ್ತೆಯನ್ನು ಹತ್ಯೆಗೈದು ಹೆಣ ಅಡಗಿಸಿಡುವ ಉದ್ದೇಶದಿಂದ ಇಬ್ಬರ ಶವವನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟು ಬಳಿಕ ನದಿಗೆ ಎಸೆದಿದ್ದಾಳೆ. ಅಸ್ಸಾಂ ಪೊಲೀಸರು ಈಕೆಯನ್ನು ವಿಚಾರಣೆ ನಡೆಸಿದ್ದು, ಅತ್ತೆ ಮತ್ತು ಗಂಡನನ್ನು ಕೊಲೆ ಮಾಡಿ ದೇಹವನ್ನು ಕತ್ತರಿಸಿ ದೇಹದ ಭಾಗಗಳನ್ನು ಫ್ರೀಜರ್‌ನಲ್ಲಿಟ್ಟಿರುವುದಾಗಿ ತಿಳಿಸಿದ್ದಾಳೆ. ಬಳಿಕ ಆ ದೇಹದ ತುಂಡುಗಳನ್ನು ಪಾಲಿಥಾನ್ ಬ್ಯಾಗ್‌ಗಳಲ್ಲಿ ಪ್ಯಾಕ್ ಮಾಡಿ ಬಳಿಕ ಮೇಘಾಲಯಕ್ಕೆ ಸಾಗಿಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಕೆಲಸಕ್ಕೆ ಈಕೆಗೆ ಪ್ರಿಯಕರ ಹಾಗೂ ಆತನ ಸ್ನೇಹಿತ ಕೂಡ ಸಹಾಯ ಮಾಡಿದ್ದಾರೆ. ಮೃತರನ್ನು ಅಮರೇಂದ್ರ ಡೇ ಮತ್ತು ಶಂಕರಿ ಡೇ ಎಂದು ಗುರುತಿಸಲಾಗಿದೆ. ಈ ಕೊಲೆ ಕಳೆದ ವರ್ಷ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ನಡೆದಿದೆ. ಹತ್ಯೆಗೀಡಾದ ತಾಯಿಯ ದೇಹದ ಕೆಲವು ಭಾಗಗಳನ್ನು ಮೇಘಾಲಯದಿಂದ ವಶಪಡಿಸಿಕೊಳ್ಳಲಾಗಿದ್ದು, ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.