ಇತ್ತೀಚೆಗಷ್ಟೇ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ಅಧಿಕಾರ ವಹಿಸಿಕೊಂಡ ಹಿರಿಯ ನಟಿ-ರಾಜಕಾರಣಿ ಖುಷ್ಬೂ ಸುಂದರ್, ನಾನು 8 ವರ್ಷ ವರ್ಷದವಳಿದ್ದಾಗ ತನ್ನ ತಂದೆಯಿಂದ ಲೈಂಗಿಕವಾಗಿ ಮತ್ತು ದೈಹಿಕವಾಗಿ ಕಿರುಕುಳಕ್ಕೊಳಗಿರುವುದಾಗಿ ಬಹಿರಂಗಪಡಿಸಿದ್ದಾರೆ.
ಮೋಜೋ ಸ್ಟೋರಿ ಬರ್ಖಾ ದತ್ ಅವರೊಂದಿಗೆ ಸಂವಾದದಲ್ಲಿ ಮಾತನಾಡಿದ ಖುಷ್ಬೂ, “ಮಗುವಿನ ಮೇಲೆ ದೌರ್ಜನ್ಯಕ್ಕೊಳಗಾದಾಗ, ಅದು ಮಗುವಿಗೆ ಜೀವಮಾನದ ಗಾಯವನ್ನು ಉಂಟುಮಾಡುತ್ತದೆ ಎಂದು ನಾನು ಭಾವಿಸುತ್ತೇನೆ ಮತ್ತು ಅದು ಹುಡುಗಿ ಅಥವಾ ಹುಡುಗನ ಬಗ್ಗೆ ಅಲ್ಲ. ತನ್ನ ಹೆಂಡತಿಯನ್ನು ಹೊಡೆಯುವುದು, ತನ್ನ ಮಕ್ಕಳನ್ನು ಹೊಡೆಯುವುದು, ತನ್ನ ಏಕೈಕ ಮಗಳನ್ನು ಲೈಂಗಿಕವಾಗಿ ನಿಂದಿಸುವುದು ತನ್ನ ಜನ್ಮಸಿದ್ಧ ಹಕ್ಕು ಎಂದು ಬಹುಶಃ ಭಾವಿಸಿದ ವ್ಯಕ್ತಿ. ನನ್ನ ಮೇಲೆ ದೌರ್ಜನ್ಯ ಪ್ರಾರಂಭವಾದಾಗ ನಾನು ಕೇವಲ 8 ವರ್ಷ ವಯಸ್ಸಿನವಳಾಗಿದ್ದೆ. ನಾನು 15 ವರ್ಷದವಳಾದಾಗ ಅವರ ವಿರುದ್ಧ ಮಾತನಾಡುವ ಧೈರ್ಯ ಮಾಡಿದೆ ಎಂದು ಹೇಳಿಕೊಂಡಿದ್ದಾರೆ.
ಆಗ ನನಗೆ ಒಂದು ನಿಲುವು ತೆಗೆದುಕೊಳ್ಳಬೇಕಾದ ಸ್ಥಿತಿ ಬಂದಿತು ಮತ್ತು ಇತರ ಕುಟುಂಬ ಸದಸ್ಯರು ನಿಂದನೆಗೆ ಒಳಗಾಗುತ್ತಾರೆ ಎಂಬ ಭಯವು ವರ್ಷಗಳವರೆಗೆ ನನ್ನ ಬಾಯಿಯನ್ನು ಮುಚ್ಚಿತ್ತು ಎಂದು ಹೇಳಿದ್ದಾರೆ. ಇನ್ನು ಮುಂದುವರೆದು ಮಾತನಾಡಿದ ಅವರು, “ನನ್ನೊಂದಿಗೆ ಉಳಿದುಕೊಂಡಿರುವ ಒಂದು ಭಯವೆಂದರೆ ನನ್ನ ತಾಯಿ ನನ್ನನ್ನು ನಂಬದೇ ಇರಹುದು. ಏಕೆಂದರೆ ‘ಕುಚ್ ಭಿ ಹೋಜಾಯೇ ಮೇರಾ ಪತಿ ದೇವತಾ ಹೈ’ ಮನಸ್ಥಿತಿಯ ವಾತಾವರಣದಲ್ಲಿ ನನ್ನ ತಾಯಿ ಇದ್ದುದ್ದನ್ನ ನಾನು ನೋಡಿದ್ದೇನೆ. ಆದರೆ 15ನೇ ವಯಸ್ಸಿಗೆ ಸಾಕು ಎಂದುಕೊಂಡು ಅವರ ವಿರುದ್ಧ ತಿರುಗಿ ಬಿದ್ದೆ ಎಂದು ಹೇಳಿದ್ದಾರೆ.