ಮಾರ್ಚ್ ಹತ್ತರಂದು ರಾಯಚೂರು ಜಿಲ್ಲೆಯ ಗುಂಜಳ್ಳಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸಂದರ್ಭದಲ್ಲಿ ಆಗಮಿಸಿದ್ದ ಕಾರ್ಯಕರ್ತರಿಗೆ ಆಹಾರ ಸಿದ್ಧಪಡಿಸಲಾಗಿದ್ದು, ಕಾರ್ಯಕ್ರಮ ಮುಗಿದ ನಂತರ ಉಳಿದ ಆಹಾರವನ್ನು ಒಂದೆಡೆ ರಾಶಿ ಹಾಕಲಾಗಿತ್ತು. ಇದನ್ನು ಸೇವಿಸಿದ ಗುಂಜಳ್ಳಿ ಗ್ರಾಮದ ಬಹುತೇಕ ಹಸು ಹಾಗೂ ಎಮ್ಮೆಗಳು ಅಸ್ವಸ್ಥಗೊಂಡಿದ್ದು, ಈ ಪೈಕಿ 7 ಹಸುಗಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ. ಎಂಟು ಹಸುಗಳು ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದು ಸಾವು – ಬದುಕಿನ ನಡುವೆ ಹೋರಾಟ ನಡೆಸುತ್ತಿವೆ.
ಪ್ಲಾಸ್ಟಿಕ್ ಸೇರಿದಂತೆ ಉಳಿದ ತ್ಯಾಜ್ಯವನ್ನು ಹಸು ಹಾಗೂ ಎಮ್ಮೆಗಳು ಸೇವಿಸಿರುವ ಶಂಕೆ ವ್ಯಕ್ತವಾಗಿದ್ದು, ಇದರ ಪರಿಣಾಮವಾಗಿಯೇ ಅಸ್ವಸ್ಥಗೊಂಡಿರಬಹುದು ಎಂದು ಹೇಳಲಾಗಿದೆ. ಇಂತಹ ಘಟನೆ ನಡೆದರೂ ಪಶು ವೈದ್ಯರು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.