ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್ ಚಂದ್ರು ಕಾಂಬಿನೇಶನ್‌ನ ಬಹು ನಿರೀಕ್ಷಿತ ಸಿನಿಮಾ ಕಬ್ಜ ತೆರೆಗೆ ಬಂದಿದೆ. ಸೆಟ್ಟೇರಿದಾಗಿನಿಂದಲೂ ವಿವಿಧ ಕಾರಣಗಳಿಂದಾಗಿ ಸತತವಾಗಿ ಸದ್ದು ಮಾಡುತ್ತಿದ್ದು ಕಬ್ಜ ಚಿತ್ರವನ್ನು ನೋಡಲೇಬೇಕೆಂದು ಸಿನಿ ರಸಿಕರು ಹಾಗೂ ಉಪೇಂದ್ರ, ಕಿಚ್ಚ ಸುದೀಪ್ ಮತ್ತು ಶಿವ ರಾಜ್‌ಕುಮಾರ್ ಅಭಿಮಾನಿಗಳು ಮುಂಗಡವಾಗಿ ಟಿಕೆಟ್ ಖರೀದಿಸಿ ಮೊದಲ ದಿನ ಚಿತ್ರಮಂದಿರಕ್ಕೆ ಕಾಲಿಟ್ಟಿದ್ದರು.
ದೊಡ್ಡ ಮಟ್ಟದ ಹೈಪ್‌ನೊಂದಿಗೆ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟ ಕಬ್ಜ ಚಿತ್ರ ಭರ್ಜರಿ ಓಪನಿಂಗ್ ಪಡೆದುಕೊಂಡಿತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾದ ಕಬ್ಜ ಚಿತ್ರಕ್ಕೆ ಎಲ್ಲೆಡೆ ಮೊದಲ ದಿನ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರ ನೋಡಿ ಹೊರಬಂದ ಸಿನಿ ರಸಿಕರು ಚಿತ್ರದ ಮೇಕಿಂಗ್, ಛಾಯಾಗ್ರಹಣ, ಹಿನ್ನೆಲೆ ಸಂಗೀತ ಹಾಗೂ ಸಂಕಲನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರ್ ಚಂದ್ರು ಶ್ರಮಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಹೀಗೆ ಮೊದಲ ದಿನ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡ ಕಬ್ಜ ಚಿತ್ರ ಬೆಂಗಳೂರು ನಗರದಲ್ಲಿ ಎರಡನೇ ದಿನ ತನ್ನ ಪ್ರದರ್ಶನಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದೆ. ಈ ವರ್ಷ ಬೆಂಗಳೂರಿನಲ್ಲಿ ಚಿತ್ರ ಬಿಡುಗಡೆಯಾದ ಎರಡನೇ ದಿನಕ್ಕೆ 600ಕ್ಕೂ ಹೆಚ್ಚು ಪ್ರದರ್ಶನ ಕಾಣುತ್ತಿರುವ ಮೊದಲನೆಯ ಚಿತ್ರ ಇದಾಗಿದೆ.