ವಾಯವ್ಯ ದೆಹಲಿಯ ಪ್ರೇಮ್ ನಗರದಲ್ಲಿ 26ರ ಹರೆಯದ ಯುವತಿಗೆ ಕೆಲಸ ಕೊಡಿಸುವ ವಿಚಾರದಲ್ಲಿ ನಡೆದ ಜಗಳದಲ್ಲಿ ಆಕೆಯ ಮಾವ ಪದೇ ಪದೇ ಇಟ್ಟಿಗೆಯಿಂದ ಆಕೆಯ ತಲೆಗೆ ಹೊಡೆದು ಹಲ್ಲೆ ಮಾಡಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ಕೆಲಸ ಮಾಡಲು ಬಯಸಿದ್ದರು. ಆದರೆ ಆಕೆಯ ಗಂಡನ ಕುಟುಂಬಸ್ಥರು ಅದನ್ನು ವಿರೋಧಿಸಿದ್ದರು ಎಂದು ಪೊಲೀಸರು ಸೇರಿಸಿದ್ದಾರೆ.
ಬುಧವಾರ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆ ಮತ್ತು ಆಕೆಯ ಮಾವ ಜಗಳವಾಡುತ್ತಿರುವುದು ಕಂಡು ಬಂದಿದೆ. ಆತ ಯುವತಿಯನ್ನು ಇಟ್ಟಿಗೆಯಿಂದ ಹೊಡೆಯುವುದಾಗಿ ಬೆದರಿಸುತ್ತಾನೆ. ಆಗ ಮಹಿಳೆ ಹೊರಹೋಗಲು ಪ್ರಯತ್ನಿಸಿದ್ದಾರೆ. ಈ ಸಂದರ್ಭ ಮಾವ, ಯುವತಿಯ ತಲೆಗೆ ಎರಡು ಬಾರಿ ಹೊಡೆದಿದ್ದಾನೆ. ಈ ವಿಡಿಯೋ ಆಧಾರದ ಮೇಲೆ ಆರೋಪಿಯನ್ನು ಗುರುತಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾವನಿಂದಲೇ ಹಲ್ಲೆಗೊಳಗಾದ ಯುವತಿಯನ್ನು ಸ್ಥಳೀಯರು ಮಧ್ಯಪ್ರವೇಶಿಸಿ ರಕ್ಷಿಸಿ ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಆಕೆಯ ತಲೆಗೆ ಹತ್ತಕ್ಕೂ ಹೆಚ್ಚು ಹೊಲಿಗೆಗಳನ್ನು ಹಾಕಲಾಗಿವೆ. ‘ಯುವತಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆ ಸ್ಥಿರವಾಗಿದ್ದಾಳೆ. ಅವರು ಸದ್ಯಕ್ಕೆ ಹೇಳಿಕೆ ನೀಡುವುದಿಲ್ಲ. ಉದ್ಯೋಗ ಸಂದರ್ಶನಕ್ಕೆ ಹೋಗುತ್ತಿದ್ದ ಕಾರಣಕ್ಕೆ ಮಾವ ಆಕೆಯನ್ನು ಥಳಿಸಿದ್ದಾರೆ ಎಂದು ಆರೋಪಿಸಿದ್ದ ಆಕೆಯ ಪೋಷಕರೊಂದಿಗೆ ಮಾತನಾಡಿದೆವು. ಆಕೆ ಕೆಲಸ ಮಾಡಿ ತನ್ನ ಕುಟುಂಬವನ್ನು ಆರ್ಥಿಕವಾಗಿ ಬೆಂಬಲಿಸಲು ಬಯಸಿದ್ದಳು ‘ಎಂದು ಪೊಲೀಸರು ಹೇಳಿದರು.