ಕೇರಳ ಸರ್ಕಾರದ ಸ್ತ್ರೀ ಶಕ್ತಿ ಲಾಟರಿಯಲ್ಲಿ 75 ಲಕ್ಷ ರೂ. ಬಹುಮಾನ ಗೆದ್ದ ಬಂಗಾಳದ ಎಸ್.ಕೆ. ಬಡೇಶ್, ಬಹುಮಾನ ಗೆಲ್ಲುತ್ತಲೇ ಇಲ್ಲಿನ ಮುವಟ್ಟುಪುಳ ಪೊಲೀಸ್ ಠಾಣೆಗೆ ಓಡಿ ಹೋಗಿ ಬಹುಮಾನದ ದುಡ್ಡಿಗೆ ರಕ್ಷಣೆ ಕೊಡುವಂತೆ ಕೋರಿಕೊಂಡಿದ್ದಾರೆ. ತನಗೆ ಲಾಟರಿ ದುಡ್ಡನ್ನು ಪಡೆಯುವ ಬಗ್ಗೆ ತಿಳಿಯದೆ ಹಾಗೂ ಬಹುಮಾನದ ದುಡ್ಡನ್ನು ಯಾರಾದರೂ ಕದ್ದುಬಿಡುವ ಭಯದ ಕಾರಣದಿಂದ ಪೊಲೀಸರ ಬಳಿ ಹೀಗೆ ಓಡಿ ಹೋಗಿದ್ದಾರೆ ಬಡೇಶ್.
ಬಡೇಶ್‌ಗೆ ಈ ಸಂಬಂಧ ಎಲ್ಲಾ ಪ್ರಕ್ರಿಯೆಗಳ ಕುರಿತು ವಿವರಣೆ ಕೊಟ್ಟ ಕೇರಳ ಪೊಲೀಸರು ಬಹುಮಾನದ ಹಣಕ್ಕೆ ಭದ್ರತೆ ಕೊಡುವುದಾಗಿ ಮಾತು ನೀಡಿದ್ದಾರೆ. ಎರ್ನಾಕುಳಂನ ಚೊಟ್ಟನಿಕಾರಾ ಎಂಬಲ್ಲಿ ರಸ್ತೆ ನಿರ್ಮಾಣದಲ್ಲಿ ಬ್ಯುಸಿಯಾಗಿರುವ ಬಡೇಶ್, ಅನೇಕ ವರ್ಷಗಳಿಂದ ಕೇರಳದಲ್ಲಿ ವಾಸಿಸುತ್ತಿದ್ದಾರೆ. ಈ ಬಹುಮಾನದ ದುಡ್ಡು ಬರುತ್ತಲೇ ತಮ್ಮೂರಿಗೆ ಹೋಗಿ ತಮ್ಮ ಜಮೀನಿನಲ್ಲಿ ವ್ಯವಸಾಯದಲ್ಲಿ ತೊಡಗಲು ನಿರ್ಧರಿಸಿದ್ದಾರೆ.