ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಎಂಬ ಕಾರಣಕ್ಕೆ ಪ್ರಿಯಕರನೊಂದಿಗೆ ಸೇರಿ ಸ್ವಂತ ತಮ್ಮನನ್ನೇ ಕೊಲೆ ಮಾಡಿ ಪರಾರಿಯಾಗಿದ್ದ ಹಂತಕಿ ಅಕ್ಕ ಹಾಗೂ ಪ್ರಿಯಕರ 8 ವರ್ಷದ ಬಳಿಕ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬಿಜಾಪುರ ಮೂಲದ ಭಾಗ್ಯಶ್ರೀ(38) ಹಾಗೂ ಶಂಕರಪ್ಪ (42) ಬಂಧಿತ ಆರೋಪಿಗಳು. ಅಕ್ಕನ ಸಂಚಿಗೆ ಲಿಂಗರಾಜು (35) ಮೃತ ದುದೈವಿ. ರಾಯಚೂರಿನ ಕಾಲೇಜೊಂದರಲ್ಲಿ ಓದುತ್ತಿದ್ದ ಭಾಗ್ಯಶ್ರೀ ಆ ದಿನಗಳಲ್ಲೆ ಶಂಕರಪ್ಪ ತಳವಾರ ಎಂಬುವನೊಂದಿಗೆ ಸಲುಗೆ ಬೆಳೆಸಿಕೊಂಡಿದ್ದಳು. ಈ ವೇಳೆಗಾಗಲೇ ಶಂಕರಪ್ಪನಿಗೆ ಮದುವೆಯಾಗಿತ್ತಾದರೂ ಭಾಗ್ಯಶ್ರೀ ಮೋಹಕ್ಕೆ ಸಿಲುಕಿ ಪತ್ನಿ ತೊರೆದು ಈಕೆ ಸಹವಾಸಕ್ಕೆ ಬಿದ್ದಿದ್ದ. ಇವರಿಬ್ಬರು ರಾಯಚೂರು ತೊರೆದು ಆನೇಕಲ್ ತಾಲೂಕಿನ ಜಿಗಣಿಯಲ್ಲಿ ವಾಸ್ತವ್ಯ ಹೂಡಿದ್ದರು.
ಅಕ್ಕನನ್ನು ಕಾಣಲು ಬಂದ ತಮ್ಮ ಲಿಂಗರಾಜು ಇವರಿಬ್ಬರ ಸಂಬಂಧವನ್ನು ವಿರೋಧಿಸಿದ್ದ, ಇದೇ ವಿಷಯಕ್ಕೆ ಶಂಕರಪ್ಪನೊಂದಿಗೆ ಗಲಾಟೆ ಮಾಡಿಕೊಂಡಿದ್ದ. ಇದರಿಂದ ಭಾಗ್ಯಶ್ರೀ ಹಾಗೂ ಶಂಕರಪ್ಪ ಆಕ್ರೋಶಗೊಂಡಿದ್ದರು. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ತಮ್ಮನನ್ನು ಕೊಲೆ ಮಾಡಲು ಸಂಚುರೂಪಿಸಿದ್ದರು.
ಲಿಂಗರಾಜು ದೇಹವನ್ನು ತುಂಡುತುಂಡಾಗಿ ಕತ್ತರಿಸಿದ ಹಂತಕರು ಕೈಕಾಲುಗಳನ್ನು ಹೋಟೆಲ್ವೊಂದರ ಹಿಂದೆ ಎಸೆದು ಉಳಿದ ದೇಹವನ್ನು ಮಂಚನಹಳ್ಳಿ ಕೆರೆಗೆ ಎಸೆದು ಮಹಾರಾಷ್ಟ್ರಕ್ಕೆ ಪರಾರಿಯಾಗಿದ್ದರು. ಆರೋಪಿಗಳ ಪತ್ತೆಯಾಗದ ಹಿನ್ನೆಲೆಯಲ್ಲಿ ಪ್ರಕರಣ ಮುಚ್ಚಿಹೋಗುವ ಹಂತದಲ್ಲಿತ್ತು. ಆನೇಕಲ್ ಠಾಣೆ ಪೊಲೀಸರ ತೀವ್ರ ತನಿಖೆಯಿಂದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.