ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ನಾಯಕರ ಸಂಭ್ರಮ ಮುಗಿಲು ಮುಟ್ಟಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆ.ಸಿ ವೇಣುಗೋಪಾಲ ಸಿಹಿ ತಿನ್ನಿಸಿ ವಿಜಯೋತ್ಸವ ಆಚರಿಸಿದ್ದಾರೆ. ಕಾಂಗ್ರೆಸ್ ಪಕ್ಷ ಐತಿಹಾಸಿಕ ಗೆಲುವು ಸಾಧಿಸಿದ ಹಿನ್ನೆಲೆ ಕೈ ನಾಯಕರು ಸರ್ಕಾರ ರಚನೆಗೆ ತಯಾರಿ ನಡೆಸಿದ್ದಾರೆ. ನಾಳೆ ಮಾನ್ಯತಾ ಟೆಕ್ ಪಾರ್ಕ್ನಲ್ಲಿರುವ ಹಿಲ್ಟನ್ ಹೋಟೆಲ್ನಲ್ಲಿ ಮಹತ್ವದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಸಿಎಂ ಯಾರಾಗಬೇಕು. ಸರ್ಕಾರ ಯಾವಾಗ ರಚಿಸಬೇಕು ಅನ್ನೋ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ.
ನಾಳೆ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಎಐಸಿಸಿ ವೀಕ್ಷಕರು ಆಗಮಿಸಲಿದ್ದಾರೆ. ವೀಕ್ಷಕರ ಸಮ್ಮುಖದಲ್ಲಿ ನೂತನ ಶಾಸಕರು ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಿದ್ದಾರೆ. ಕಾಂಗ್ರೆಸ್ ಸಿಎಂ ರೇಸ್ನಲ್ಲಿ ಪ್ರಮುಖವಾಗಿ ಇಬ್ಬರ ಹೆಸರು ಪ್ರಸ್ತಾಪವಾಗ್ತಿದೆ. ಹೀಗಾಗಿ ಶಾಸಕರ ಅಭಿಪ್ರಾಯ ಪಡೆದು ಸಿಎಂ ಅಭ್ಯರ್ಥಿ ಆಯ್ಕೆ ಮಾಡುವ ಸಾಧ್ಯತೆ ಇದೆ. ನಾಳೆ ಶಾಸಕಾಂಗ ಪಕ್ಷದ ಸಭೆಯ ಹಿನ್ನೆಲೆಯಲ್ಲಿ ಇಂದು ರಾತ್ರಿಯೇ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಶಾಸಕರು ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ನಗರದ ಹಿಲ್ಟನ್ ಹಾಗೂ ಶಾಂಘ್ರಿಲಾ ಹೋಟೆಲ್ನಲ್ಲಿ ರೂಮ್ಗಳನ್ನು ಬುಕ್ ಮಾಡಲಾಗಿದೆ. ಇಂದು ರಾತ್ರಿಯೇ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಬಂದು ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.