ಸ್ನೇಹಿತನಿಗೆ ನೆರವು ನೀಡಲು ಆನ್ ಲೈನ್ ನಲ್ಲಿ ಸಾಲ ಮಾಡಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಎಚ್ ಎಂಟಿ ಲೇಔಟ್ ನಲ್ಲಿ ನಡೆದಿದೆ. ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತೇಜಸ್ ವಿದ್ಯಾರ್ಥಿ ತಾಯಿಯ ವೇಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ.
ಸ್ನೇಹಿತ ಮಹೇಶನಿಗೆ ನೆರವು ನೀಡಲು ತೇಜಸ್ ಚೀನಾ ಆಯಪ್ ಸ್ಪೈಲ್ಸ್ ಪೇ, ಕಿಶ್ತ್ ಆಪ್ ಮತ್ತು ಮಹೀಂದ್ರ ಆಪ್ ಗಳಲ್ಲಿ ಸಾಲ ಮಾಡಿದ್ದ. ಆದರೆ ಮಹೇಶ್ ಒಂದು ವರ್ಷದಿಂದ ಸಾಲದ ಕಂತು ಪಾವತಿಸದ ಕಾರಣ ಆನ್ ಲೈನ್ ನಲ್ಲಿ ಸಾಲ ನೀಡಿದ್ದ ಕಂಪನಿಗಳು ಕಿರುಕುಳ ನೀಡಲು ಆರಂಭಿಸಿದ್ದರು.
ಚೀನಾ ಲೋನ್ ಆಪ್ ಗಳು ಸಾಲ ಮರುಪಾವತಿ ಮಾಡದೇ ಇದ್ದರೆ ನಿಮ್ಮ ಮೊಬೈಲ್ ಗ್ಯಾಲರಿಯಿಂದ ತೆಗೆದಿರುವ ಬೆತ್ತಲೆ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಡುವುದಾಗಿ ಬೆದರಿಕೆ ಹಾಕಿ ಪದೇಪದೆ ಕಿರುಕುಳ ನೀಡುತ್ತಿದ್ದವು ಎಂದು ತಿಳಿದು ಬಂದಿದೆ.
ಅಪ್ಪ-ಅಮ್ಮ ನನ್ನನ್ನು ಕ್ಷಮಿಸಿ. ನಾನು ಮಾಡಿರುವ ತಪ್ಪಿಗೆ ಕ್ಷಮೆಯಿಲ್ಲ. ಮಾಡಿರುವ ಸಾಲ ತೀರಿಸಲು ಆಗುವುದಿಲ್ಲ, ಇದು ನನ್ನ ಕೊನೆ ತೀರ್ಮಾನ’ ‘ಥ್ಯಾಂಕ್ಸ್ ಗುಡ್ ಬೈ ಎಂದು ಡೆತ್ ನೋಟ್ ಬರೆದಿಟ್ಟು ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ತೇಜಸ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ವಿದ್ಯಾರ್ಥಿಯ ಶವವನ್ನು ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಜಾಲಹಳ್ಳಿ ಪೊಲೀಸ್ ಠಾಣೆಗೆ ತೇಜಸ್ ಪೋಷಕರು ದೂರು ನೀಡಿದಿದ್ದಾರೆ.