ಐನೂರು ವರ್ಷಗಳ ಹಿಂದೆ ಕಣ್ಮರೆಯಾದ ಹಡಗೊಂದು ನೈಋತ್ಯ ಆಫ್ರಿಕಾದ ಮರುಭೂಮಿಯಲ್ಲಿ ಪತ್ತೆಯಾಗಿದೆ. ಪುರಾತತ್ತ್ವ ಶಾಸ್ತ್ರದ ಸಂಶೋಧನೆಯಲ್ಲಿ ಈ ಹಡಗು ಕಂಡು ಬಂದಿದ್ದು, ವಿಶೇಷತೆ ಏನೆಂದರೆ ಹಡಗಿನಲ್ಲಿ ಸುಮಾರಷ್ಟು ಚಿನ್ನದ ನಾಣ್ಯಗಳು ಪತ್ತೆಯಾಗಿವೆ. ಬೊಮ್ ಜೀಸಸ್ (ದಿ ಗುಡ್ ಜೀಸಸ್) ಹಡಗು ಪೋರ್ಚುಗಲ್‌ನ ಲಿಸ್ಬನ್‌ನಿಂದ ಶುಕ್ರವಾರ, ಮಾರ್ಚ್ 7, 1533 ರಂದು ನೌಕಾಯಾನ ಮಾಡಿತ್ತು. ಅಂದರೆ ಸುಮಾರು ಐನೂರು ವರ್ಷಗಳ ಹಿಂದೆ ನೌಕಾಯಾನಕ್ಕೆ ಹೋಗಿದ್ದ ಹಡಗು ಕಣ್ಮರೆಯಾಗಿತ್ತು. ನಂತರ 2008ರಲ್ಲಿ ಅದರ ಅವಶೇಷಗಳು ನಮೀಬಿಯಾದ ಮರುಭೂಮಿಯಲ್ಲಿ ವಜ್ರ ಗಣಿಗಾರಿಕೆ ಕಾರ್ಯಾಚರಣೆಯ ಸಮಯದಲ್ಲಿ ಪತ್ತೆಯಾಗಿತ್ತು.
ಪ್ರಸ್ತುತ ಪೂರ್ತಿ ಹಡಗು ನೈಋತ್ಯ ಆಫ್ರಿಕಾದ ಮರುಭೂಮಿಯಲ್ಲಿ ಪತ್ತೆಯಾಗಿದೆ. ಭಾರತಕ್ಕೆ ಚಿನ್ನ ಮತ್ತು ತಾಮ್ರವನ್ನು ಈ ಹಡಗು ಹೊತ್ತು ಬರುತ್ತಿತ್ತು ಎನ್ನಲಾಗಿದೆ. ಆದರೆ ಭೀಕರ ಚಂಡಮಾರುತಕ್ಕೆ ತುತ್ತಾಗಿದ್ದ ಹಡಗು ನಾಪತ್ತೆಯಾಗಿತ್ತು.
ಈಗ ಮತ್ತೆ ಪತ್ತೆಯಾಗಿರುವ ಬೊಮ್ ಜೀಸಸ್ ಹಡಗಿನಲ್ಲಿ ಎರಡು ಸಾವಿರ ಶುದ್ಧ ಚಿನ್ನದ ನಾಣ್ಯಗಳು ಮತ್ತು ಹತ್ತಾರು ಸಾವಿರ ಪೌಂಡ್‌ಗಳ ತಾಮ್ರದ ಗಟ್ಟಿಗಳು ಕಂಡು ಬಂದಿವೆ. ಅಚ್ಚರಿ ಅಂದರೆ ಐನೂರು ವರ್ಷಗಳ ಹಿಂದಿನ ನಾಣ್ಯಗಳು ಸ್ವಲ್ಪವೂ ವಿರೂಪವಾಗದೇ ಹಾಗೆಯೇ ಇವೆ. ಈಗ ಕರಾವಳಿಯ ನೀರು ಕಡಿಮೆಯಾದ ಕಾರಣ ಬೊಮ್ ಜೀಸಸ್ ಮರುಭೂಮಿಯಲ್ಲಿ ಮತ್ತೆ ಕಾಣಿಸಿಕೊಂಡಿದೆ.
ಚಿನ್ನ ಸೇರಿ ಇತರೆ ಬೆಲೆಬಾಳುವ ಸರಕುಗಳು ಪತ್ತೆ. ದಕ್ಷಿಣ ಆಫ್ರಿಕಾ ಇನ್‌ಸ್ಟಿಟ್ಯೂಟ್ ಆಫ್ ಮ್ಯಾರಿಟೈಮ್ ಆರ್ಕಿಯಾಲಾಜಿಕಲ್ ರಿಸರ್ಚ್‌ನ ಮುಖ್ಯ ಪುರಾತತ್ವಶಾಸ್ತ್ರಜ್ಞ ಡಾ ನೋಲಿ, ದೇಶದ ಕರಾವಳಿಯು ಹಲವು ಚಂಡಮಾರುತಗಳಿಗೆ ಕಾರಣವಾಗಿದೆ. ಹೀಗಾಗಿ, ಹಡಗು ಹಾನಿ ಕಂಡುಬರುತ್ತಿರುವುದು ಅಷ್ಟೇನೂ ಆಶ್ಚರ್ಯಕರ ಬೆಳವಣಿಗೆಯಲ್ಲ ಎಂದು ಹೇಳಿದರು. ಉತ್ಖನನದ ಒಂದು ವಾರದ ನಂತರ, ಚಿನ್ನದಿಂದ ತುಂಬಿದ ನಿಧಿಯ ಪೆಟ್ಟಿಗೆಯು ಕಂಡುಬಂದಿದೆ, ಇದು ಚಿನ್ನದಿಂದ ತುಂಬಿದ ಹಡಗು ಎಂಬ ಪರಿಕಲ್ಪನೆಗೆ ಹೊಸ ಅರ್ಥವನ್ನು ಸೇರಿಸುತ್ತದೆ ಎಂದು ಡಾ ನೋಲಿ ಆಫ್ರೀಕಾದ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದರು.
ಚಿನ್ನ, ತಾಮ್ರದ ಜೊತೆ ಕಂಚಿನ ಬಟ್ಟಲುಗಳು, ಬೆಳ್ಳಿ ನಾಣ್ಯಗಳು ಮತ್ತು ಉದ್ದವಾದ ಲೋಹದ ಕಂಬಗಳು ಕಂಡು ಬಂದಿವೆ. ಹಾಗೆಯೇ ದಿಕ್ಸೂಚಿಗಳು, ಕತ್ತಿಗಳು, ಜ್ಯೋತಿಷ್ಯ ಉಪಕರಣಗಳು ಮತ್ತು ಸಮಯದ ಕ್ಯಾಪ್ಸುಲ್ ಹಡಗಿನಲ್ಲಿ ಪತ್ತೆಯಾಗಿವೆ ಎಂದು ವರದಿಗಳು ತಿಳಿಸಿವೆ.
ಆ ಕಾಲದ ಬಲಿಷ್ಠ ನೌಕೆ ಬೋಮ್ ಜೀಸಸ್‌ನ ಹಡಗಿನ ಇತಿಹಾಸದ ಬಗ್ಗೆ ಹೆಚ್ಚು ತಿಳಿದಿಲ್ಲವಾದರೂ, ಈ ಹಡಗು ಹಿಂದಿನ ಪೋರ್ಚುಗೀಸ್ ಮತ್ತು ಸ್ಪ್ಯಾನಿಷ್ ಹಡಗುಗಳಿಗಿಂತ ದೊಡ್ಡದಾದ, ಹೆಚ್ಚು ಪರಿಣಾಮಕಾರಿ ಮತ್ತು ಹೆಚ್ಚು ಬಾಳಿಕೆ ಬರುವ ನೌಕಾ ಹಡಗುಗಳ ಒಂದು ವರ್ಗದ ಭಾಗವಾಗಿದೆ ಎಂದು ಊಹಿಸಲಾಗಿದೆ. ಈ ಆವಿಷ್ಕಾರದ ಬಳಿಕ ಬೊಮ್ ಜೀಸಸ್ ಅನ್ನು ಉಪ-ಸಹಾರನ್ ಆಫ್ರಿಕಾದ ಪಶ್ಚಿಮ ಕರಾವಳಿಯಲ್ಲಿ ಪತ್ತೆಯಾದ ಅತ್ಯಂತ ಹಳೆಯ ಮತ್ತು ಅತ್ಯಮೂಲ್ಯವಾದ ಹಡಗು ಎನ್ನಲಾಗಿದೆ.
ಹಡಗು ಪತ್ತೆಯಾದ ಸ್ಥಿತಿಯನ್ನು ಗಮನಿಸಿದ ತಜ್ಞರು ಭೀಕರ ಚಂಡಮಾರುತಕ್ಕೆ ಸಿಕ್ಕಿ ಬಂಡೆಗೆ ಗುದ್ದಿದ ಪರಿಣಾಮ ಹಡಗು ದುರಂತ ಸಂಭವಿಸಿದೆ ಎಂದು ಊಹಿಸಿದ್ದಾರೆ. ಕೆಲವೇ ಕೆಲವು ಮಾನವ ಅವಶೇಷಗಳು ಕಂಡುಬಂದಿದ್ದು ದುರಂತದಲ್ಲಿ ಎಲ್ಲರೂ ಸಮುದ್ರಪಾಲಾಗಿರಬಹುದು ಅಥವಾ ಅಲ್ಲರೂ ಬಚಾಬ್ ಆಗಿರಬಹುದು ಎಂದು ತಜ್ಞರು ಹೇಳಿದ್ದಾರೆ. ಹಡಗಿನ ಅವಶೇಷಗಳು ಹಿಂದೆ ನಮೀಬಿಯಾದಲ್ಲಿ ಕಂಡುಬಂದಿದ್ದವು. ಹೆಚ್ಚಿನ ಗಣಿಗಾರಿಕೆ ನಡೆಯುತ್ತಿದ್ದ ಕಾರಣ ಸರ್ಕಾರ ಈ ಪ್ರದೇಶವನ್ನು “ನಿಷೇಧಿತ ಪ್ರದೇಶ” ಎಂದು ಗುರುತಿಸಿತು.