ನೈರುತ್ಯ ಮುಂಗಾರು ಚುರುಕುಗೊಂಡಿರುವ ಹಿನ್ನೆಲೆ ರಾಜ್ಯಾದ್ಯಂತ ಮುಂದಿನ 3 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ ಭಾಗಕ್ಕೆ ಇಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿನ ಒಂದೆರಡು ಕಡೆ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಈ ಹಿನ್ನೆಲೆ 3 ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜೋರಾದ ಮಳೆ ಸಾಧ್ಯತೆಯಿದ್ದು, ಇಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಬುಧವಾರ ಹಾಗೂ ಗುರುವಾರಕ್ಕೆ ಆರೆಂಜ್ ಅಲರ್ಟ್ ನೀಡಲಾಗಿದೆ. ಮಾತ್ರವಲ್ಲದೇ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹಾಸನ ಜಿಲ್ಲೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಬುಧವಾರದಿಂದ 4 ದಿನಗಳ ಕಾಲ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಮುಂದಿನ 5 ದಿನಗಳ ಕಾಲ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇಂದಿನಿಂದ 5 ದಿನಗಳ ಕಾಲ ಬಿರುಗಾಳಿಯ ವೇಗ ಗಂಟೆಗೆ 55 ಕಿ.ಮೀ ಇರಲಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.