ಈ ಸರ್ಕಾರದಲ್ಲಿ ತಾವು ಹೇಳಿದ ಕೆಲಸ ಆಗುತ್ತಿಲ್ಲ ಎಂದು ರೋಸಿಹೋದ ಶಾಸಕರೊಬ್ಬರು, ‘ನನ್ನನ್ನು ಯಾವುದೇ ಸಚಿವರ ಪಿಎ, ವಿಶೇಷಾಧಿಕಾರಿ ಮಾಡಿಬಿಡಿ’ ಎಂದು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಪ್ರಸಂಗ ನಡೆದಿದೆ. ಕೆಲವು ಸಚಿವರು ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ, ಅನುದಾನ‌ ಕೊಡುತ್ತಿಲ್ಲ, ನಾವು ಹೇಳಿದವರಿಗೆ ವರ್ಗಾವಣೆ ಮಾಡುತ್ತಿಲ್ಲ ಎಂದು ಮೂವತ್ತಕ್ಕಿಂತ ಹೆಚ್ಚು ಶಾಸಕರು ಸಹಿ ಸಂಗ್ರಹಿಸಿದ ಬೆನ್ನಲ್ಲೇ ಗುರುವಾರ ರಾತ್ರಿ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ಸಭೆ ನಡೆಸಿದರು.
ಈ ವೇಳೆ ಸಹಿ ಸಂಗ್ರಹ ಹಾಗೂ ಪತ್ರದ ವಿಚಾರವೂ ಪ್ರಸ್ತಾಪವಾಯಿತು. ಕೆಲವು ಹಿರಿಯ ಶಾಸಕರು ಮಾಧ್ಯಮದ ಜತೆ ಅನೌಪಚಾರಿಕ ಚರ್ಚೆ ನಡೆಸುವಾಗ ತಮ್ಮನ್ನು ಸಚಿವರು ನಡೆಸಿಕೊಂಡ ರೀತಿ ಬಗ್ಗೆ ಸಂಕಟ ತೋಡಿಕೊಂಡರು. ಒಬ್ಬ ಶಾಸಕರು, ಶಾಸಕರು ಯಾವ ಮಟ್ಟಿಗೆ ರೋಸಿಹೋಗಿದ್ದಾರೆಂದು ದಾಖಲೆಯನ್ನು ಸಹ ತೋರಿಸಿದರು. ದಾವಣಗೆರೆ ಜಿಲ್ಲೆಯ ಕಿರಿಯ ಶಾಸಕರೊಬ್ಬರು ಸಿಎಂಗೆ ಬರೆದ ಪತ್ರ ಈ ವೇಳೆ ಗಮನಕ್ಕೆ ತಂದರು. ನಮ್ಮ ಯಾವುದೇ ಬೇಡಿಕೆಗೆ ಸರ್ಕಾರದಲ್ಲಿ ಸ್ಪಂದನೆ ಸಿಗುತ್ತಿಲ್ಲ. ಕ್ಷೇತ್ರದಲ್ಲಿ ಜನರಿಗೆ ಮುಖ ತೋರಿಸಲು ಸಾಧ್ಯವಾಗುತ್ತಿಲ್ಲ. ಈ ಸರ್ಕಾರದಲ್ಲಿ ಸಚಿವರ ಪಿಎ, ಒಎಸ್ ಡಿ ಮಾತಾದರೂ ನಡೆಯುತ್ತದೆ. ನನ್ನನ್ನು ಈ‌ ಕೆಲಸಕ್ಕೆ ನಿಯೋಜಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಪತ್ರ ಶಾಸಕರ ನಡುವೆ ಹರಿದಾಡಿದ್ದು, ನಗೆಯ ಬುಗ್ಗೆ ಉಮ್ಮಳಿಸಿದೆ. ‘ಶಿವ ಶಿವಾ…’ ಎಂದು ಪತ್ರ ಉಲ್ಲೇಖಿಸಿ ನಗೆಯಾಡಿದ್ದು ಜತೆಗೆ ಒಂದಿಬ್ಬರು ಸಚಿವರ ನಡವಳಿಕೆ ಬಗ್ಗೆ ತೀವ್ರತರ ಚರ್ಚೆ ಕೂಡ ಆಗಿದೆ.

error: Content is protected !!