ವಿವಾಹಿತೆ ಹಿಂದೆ ಬಿದ್ದು ಯುವಕನೊಬ್ಬ ಬರ್ಬರವಾಗಿ ಕೊಲೆಯಾದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿ ನಡೆದಿದೆ. ಕೋಲಾರದ ಮಾಲೂರು ತಾಲೂಕಿನ ಅಯ್ಯಪ್ಪನಗರದ ನಿವಾಸಿ ಚೇತನ್ ಮೃತ ದುರ್ದೈವಿ. ಕಳೆದ ಅಕ್ಟೋಬರ್ 26ರಂದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮುಗಳೂರು ಬ್ರಿಡ್ಜ್ ಸಮೀಪದ ದಕ್ಷಿಣ ಪಿನಾಕಿನಿ ಹೊಳೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅಪರಿಚಿತ ವ್ಯಕ್ತಿಯನ್ನು ಚೇತನ್ ಎಂದು ಗುರುತಿಸಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ವೊಂದು ಸಿಕ್ಕಿದೆ.
ಶೋಭಾ ಈ ಹಿಂದೆ ಅತ್ತಿಬೆಲೆ ಕೊಲೆ ಯತ್ನ ಪ್ರಕರಣದಲ್ಲಿ ಜೈಲಿಗೆ ಸೇರಿದ್ದಳು. ಪತಿ, ಅತ್ತೆ, ಮಾವರನ್ನು ಮನೆಯಲ್ಲಿ ಕೂಡಿ ಹಾಕಿ ಬೆಂಕಿ ಹಚ್ಚಿದ್ದಳು. ಈ ಪ್ರಕರಣದಲ್ಲಿ ಜೈಲು ಸೇರಿ ಬೇಲ್ ಮೇಲೆ ರಿಲೀಸ್ ಆಗಿದ್ದಳು. ಜೈಲಿನಿಂದ ಹೊರಬಂದ ಮೇಲೆ ಟಿಸಿ ಪಾಳ್ಯದಲ್ಲಿ ವಾಸವಾಗಿದ್ದಳು. ಅಲ್ಲೇ ಸಲೂನ್ ಬ್ಯೂಟಿ ಪಾರ್ಲರ್ನಲ್ಲಿ ಕೆಲಸ ಮಾಡಿಕೊಂಡಿದ್ದಳು.
ನಂತರ ಶೋಭಾ ಚೇತನ್ಗೆ 8 ತಿಂಗಳ ಹಿಂದೆ ಪರಿಚಯವಾಗಿದ್ದಳು. ಪರಿಚಯ ಪ್ರೀತಿಗೆ ತಿರುಗಿ ಈತನ ಜತೆಗೆ ಅನೈತಿಕ ಸಂಬಂಧ ಹೊಂದಿದ್ದಳು. ಈ ನಡುವೆ ಕಳೆದ ಮೂರು ತಿಂಗಳ ಹಿಂದೆ ಶೋಭಾಳಿಗೆ ಸತೀಶ್ ಎಂಬಾತನ ಪರಿಚಯವಾಗಿತ್ತು. ಆತನ ಜತೆಗೂ ಪ್ರೇಮ ಪುರಾಣ ಶುರು ಮಾಡಿದ್ದಳು. ಸತೀಶ್ ಹಣಕಾಸಿನ ವಿಚಾರದಲ್ಲಿ ಚೇತನ್ಕ್ಕಿಂತ ಹಣವಂತನಾಗಿದ್ದ. ಶೋಭಾಳಿಗಾಗಿ ಹೊಸದೊಂದು ಸಲೂನ್ ಬ್ಯೂಟಿ ಪಾರ್ಲರ್ ಮಾಡಿಕೊಡಲು ಸಿದ್ಧತೆ ನಡೆಸಿದ್ದ. ಈ ನಡುವೆ ಶೋಭಾ ಚೇತನ್ನಿಂದ ದೂರವಾಗಲು ನಿರ್ಧರಿಸಿದ್ದಳು.
ಹೀಗಾಗಿ ಸತೀಶ್ ಜತೆಗೆ ನಾಟಕವಾಡಲು ಶುರು ಮಾಡಿದ್ದಳು. ಚೇತನ್ ತನ್ನ ಹಿಂದೆ ಬಿದ್ದು ಪೀಡಿಸುತ್ತಿದ್ದಾನೆ ಎಂದು ಕಥೆ ಕಟ್ಟಿದ್ದಳು. ಅದಾದ ಬಳಿಕ ಸತೀಶ್ ಜತೆ ಸೇರಿ ಚೇತನ್ ಕೊಲೆ ಮಾಡಲು ಸಂಚು ರೂಪಿಸಿದ್ದಳು. ಕಳೆದ ಅ.26ರಂದು ಹೊಸಕೋಟೆ ಐಶ್ವರ್ಯ ಬಾರ್ನಲ್ಲಿ ಎಣ್ಣೆ ಪಾರ್ಟಿ ಯೋಜಿಸಿದ್ದಳು. ಎಣ್ಣೆ ಪಾರ್ಟಿ ಮುಗಿಸಿ ಮಧ್ಯರಾತ್ರಿ 2 ಗಂಟೆಗೆ ಮುಗಳೂರು ಬಳಿ ಬಂದಾಗ ಮಚ್ಚಿನಿಂದ ಹೊಡೆದು ಹತ್ಯೆ ಮಾಡಿ ಹೊಳೆಗೆ ಎಸೆದು ಹೋಗಿದ್ದರು.
ಈ ಸಂಬಂಧ ಪೊಲೀಸರು ತನಿಖೆ ನಡೆಸಿದಾಗ ವಿವಾಹಿತ ಮಹಿಳೆಗಾಗಿ ಈ ಕೊಲೆ ನಡೆದಿದೆ ಎಂಬುದು ತಿಳಿದು ಬಂದಿದೆ. ಪ್ರಕರಣ ಸಂಬಂಧ ಸರ್ಜಾಪುರ ಪೊಲೀಸರು ಆರೋಪಿಗಳಾದ ಸತೀಶ್, ಶಶಿ ಹಾಗೂ ಶೋಭಾಳನ್ನು ಬಂಧಿಸಿದ್ದಾರೆ.