ಮೈಸೂರು: ಬಿರುಗಾಳಿ ಸಮೇತ ಬಿದ್ದ ಭಾರಿ ಮಳೆಗೆ ಮೈಸೂರು ನಗರದ ಹಲವಡೆ ಮರಗಳು ರಸ್ತೆಗೆ ಉರುಳಿ ಬಿದ್ದಿವೆ. ಪ್ರಮುಖ ರಸ್ತೆಗಳಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿದೆ. ಮರದ ಕೊಂಬೆಗಳ ತೆರುವಿಗೆ ಪಾಲಿಕೆ ಸಿಬ್ಬಂದಿಗಳೊಂದಿಗೆ ಪೊಲೀಸರು ಸಹ ಮುಂದಾಗಿ ಅಚ್ಚರಿ ಮೂಡಿಸಿದ್ದಾರೆ. ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗ ಭಾರಿ ಮಳೆಗೆ ಒಟ್ಟು ಐದು ಮರಗಳ ಕೊಂಬೆಗಳು ಮುರಿದುಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕೆ ಸಿಬ್ಬಂದಿಗಳ ಸಮೇತ ಆಗಮಿಸಿದ ಲಷ್ಕರ್ ಠಾಣೆ ಇನ್ಸ್ಪೆಕ್ಟರ್ ಸಲೀಂ ಅಬ್ಬಾಸ್ ಮತ್ತು ದೇವರಾಜ ಸಂಚಾರ ಠಾಣಾ ಸಿಬ್ಬಂದಿಗಳು ಪಾಲಿಕೆಯ ಅಭಯ ತಂಡದೊಂದಿಗೆ ರಸ್ತೆಗೆ ಅಡ್ಡಲಾಗಿ ಬಿದ್ದ ಕೊಂಬೆಗಳ ತೆರವಿಗೆ ಮುಂದಾದರು. ಸಲೀಂ ಅಬ್ಬಾಸ್ ಮತ್ತು ಸಿಬ್ಬಂದಿಗಳ ಕಾರ್ಯಕ್ಕೆ ಸಾರ್ವಜನಿಕರು ಸಹ ಸಾಥ್ ನೀಡಿದರು. ಪೊಲೀಸರ ಸಾಮಾಜಿಕ ಕಳಕಳಿಗೆ ಸಾರ್ವಜನಿಕರ ಮೆಚ್ಚುಗೆಯೂ ವ್ಯಕ್ತವಾಯಿತು. ಪೊಲೀಸರ ಕಾರ್ಯವೈಖರಿಗೆ ಇಲಾಖಾ ಮೇಲಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.