ಕಾಂತಾರಾ-2 ಚಿತ್ರತಂಡಕ್ಕೆ ಬಿಗ್ ಶಾಕ್ ನೀಡುವಂತೆ, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಷರತ್ತು ಉಲ್ಲಂಘನೆಯ ಕುರಿತಾಗಿ ತಕ್ಷಣ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ವನ್ಯಜೀವಿಗಳು ಅಥವಾ ಸಸ್ಯ ಸಂಕುಲಕ್ಕೆ ಹಾನಿಯಾಗುವ ಸಂದರ್ಭದಲ್ಲಿ ಚಿತ್ರೀಕರಣ ತಕ್ಷಣ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳುವಂತೆ ಅವರು ಖಡಕ್ ಸೂಚನೆ ನೀಡಿದ್ದಾರೆ.
ಈ ಕುರಿತು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಈಶ್ವರ್ ಖಂಡ್ರೆ ಪತ್ರ ಬರೆದಿದ್ದಾರೆ. ಅರಣ್ಯ ಇಲಾಖೆಯ ವರದಿಯ ಪ್ರಕಾರ, ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ವಲಯದ ಶನಿವಾರ ಸಂತ ಬಳಿ ಇರುವ ಹೇರೂರು ಗ್ರಾಮದ ಗವಿಬೆಟ್ಟ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ 2025ರ ಜನವರಿ 3ರಿಂದ 15ರ ವರೆಗೆ ತಾತ್ಕಾಲಿಕ ಸೆಟ್ ನಿರ್ಮಾಣಕ್ಕೆ, ಮತ್ತು ಜನವರಿ 15 ರಿಂದ 25ರ ವರೆಗೆ ಕಾಂತಾರಾ ಚಾಪ್ಟರ್ 1 ಚಿತ್ರೀಕರಣಕ್ಕೆ ಷರತ್ತುಬದ್ಧ ಅನುಮತಿ ನೀಡಲಾಗಿದೆ.
ಆದರೆ ಮಾಧ್ಯಮ ವರದಿಗಳ ಪ್ರಕಾರ, ಈ ಚಿತ್ರೀಕರಣದ ವೇಳೆ ಕಾಡಿನ ಅಂಚಿನ ಪರಿಭಾವಿತ ಅರಣ್ಯ ಪ್ರದೇಶದ ಬಳಿ ಸ್ಫೋಟಕಗಳನ್ನು ಬಳಸಲಾಗುತ್ತಿದೆ. ಇದರಿಂದ ವನ್ಯಜೀವಿಗಳು ಭಯಭೀತರಾಗಿ ಅರಣ್ಯ ಪರಿಸರದ ಶಾಂತಿಗೆ ಧಕ್ಕೆ ಉಂಟಾಗುತ್ತಿರುವುದು ತಿಳಿದುಬಂದಿದೆ.
ಸಚಿವರು ಈ ವಿಷಯದಲ್ಲಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ. ಷರತ್ತು ಉಲ್ಲಂಘನೆ ದೃಢವಾದರೆ, ಅಥವಾ ವನ್ಯಜೀವಿಗಳು ಮತ್ತು ಸಸ್ಯ ಸಂಕುಲಕ್ಕೆ ಯಾವುದೇ ಹಾನಿ ಉಂಟಾದರೆ, ಚಿತ್ರೀಕರಣವನ್ನು ತಕ್ಷಣ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಲು ಅವರು ಆದೇಶಿಸಿದ್ದಾರೆ. ಈ ಆದೇಶ ಕಾಂತಾರಾ-2 ಚಿತ್ರತಂಡಕ್ಕೆ ದೊಡ್ಡ ಶಾಕ್ ಆಗಿದೆ.