ಹಣ ಪಡೆದು ಕೆಲಸಕ್ಕೆ ಬರುವಲ್ಲಿ ವಿಳಂಬ ಮಾಡಿದ ಕಾರಣಕ್ಕೆ ಮೂವರು ಕಾರ್ಮಿಕರ ಮೇಲೆ ದೌರ್ಜನ್ಯ ಮಾಡಿರುವ ಪ್ರಕರಣದಲ್ಲಿ, ಇಟ್ಟಿಗೆ ಕಾರ್ಖಾನೆ ಮಾಲೀಕ ಖೇಮು ರಾಠೋಡ್, ವಿಶಾಲ ಜುಮನಾಳ ಮತ್ತು ಸಚಿವ ಮಾನವರ ಅವರನ್ನು ಗಾಂಧಿನಗರದಲ್ಲಿರುವ ಖೇಮು ಅವರ ನಿವಾಸದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣ ವಿಜಯಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪರಾರಿಯಾಗಿರುವ ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಸಾಗುತ್ತಿದೆ.

ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿದ್ದು, ಜನವರಿ 18 ರಂದು ಖೇಮು ರಾಠೋಡ್ ಮತ್ತು ಅವರ ಸಹಚರರು ವಿಜಯಪುರ ಹೊರವಲಯದ ಇಟ್ಟಿಗೆ ಕಾರ್ಖಾನೆಯಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಚಿಕ್ಕಲಕಿ ಗ್ರಾಮದ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಾರೆ. ಕಾರ್ಮಿಕರು ಮುಂಗಡ ಹಣ ಪಡೆದು ಸಂಕ್ರಾಂತಿ ಹಬ್ಬಕ್ಕೆ ತೆರಳಿದ್ದ ಕಾರಣ, ಹಿಂದಿರುಗಲು ತಡವಾದ ಹಿನ್ನೆಲೆಯಲ್ಲಿ ಈ ಹಲ್ಲೆ ನಡೆದಿದೆ. ದೌರ್ಜನ್ಯದಲ್ಲಿ ಕಾರ್ಮಿಕರ ಮೇಲೆ ಪೈಪ್ ಮತ್ತು ಕಟ್ಟಿಗೆಯೊಂದಿಗೆ ಹಲ್ಲೆ ನಡೆಸಲಾಗಿದೆ. ಈ ಘಟನೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಹಲ್ಲೆಗೊಳಗಾದ ಕಾರ್ಮಿಕರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. “ಈ ಪ್ರಕರಣದಲ್ಲಿ ಕಾನೂನು ಪ್ರಕಾರ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಹಲ್ಲೆ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಯಾರೇ ತಪ್ಪು ಮಾಡಿದರೂ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!