ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಮಹಾಕುಂಭಮೇಳ ಪ್ರದೇಶದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡು ಅವ್ಯವಸ್ಥೆ ಉಂಟಾಗಿದೆ. ಗಂಗಾ ಸೇತುವೆಯ ಬಲಭಾಗದಲ್ಲಿ ಈ ಅವಘಡ ಸಂಭವಿಸಿದ್ದು, ಸ್ಥಳೀಯ ಜನರಲ್ಲಿ ಆತಂಕ ಮೂಡಿಸಿದೆ.

ಬೆಂಕಿಯ ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತಲುಗಿ ಕಾರ್ಯಾರಂಭಿಸಿದರೂ, ಈ ಘಟನೆ ಭಕ್ತರಲ್ಲಿ ಭಯ ಹುಟ್ಟಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ವರದಿಗಳ ಪ್ರಕಾರ, ಸೆಕ್ಟರ್ ಸಂಖ್ಯೆ 19 ರ ಸೇತುವೆ ಸಂಖ್ಯೆ 12ರ ಬಳಿ, ಝುನ್ಸಿ ರೈಲ್ವೆ ಮಾರ್ಗದ ಕೆಳಗಿರುವ ಗೀತಾ ಪ್ರೆಸ್ ಶಿಬಿರದಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯರ ಪ್ರಕಾರ, ಶಿಬಿರದಲ್ಲಿ ಆಹಾರವನ್ನು ತಯಾರಿಸುವಾಗ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಹತ್ತಿಕೊಂಡಿದೆ. ಪರಿಣಾಮ, ಬೆಂಕಿ ಶೀಘ್ರವಾಗಿ ವ್ಯಾಪಿಸಿ 20-25 ಡೇರೆಗಳನ್ನು ಆವರಿಸಿದೆ. ಶಿಬಿರದಲ್ಲಿ ಸುಮಾರು 500ಕ್ಕೂ ಹೆಚ್ಚು ಜನರಿದ್ದರೆಂದೂ ವರದಿಯಾಗಿದೆ.

ಈ ಘಟನೆ ನಿಭಾಯಿಸಲು ಅಗ್ನಿಶಾಮಕ ದಳದ ಹಲವಾರು ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು, ಕಾರ್ಯಾಚರಣೆ ಇನ್ನೂ ಮುಂದುವರಿಯುತ್ತಿದೆ.

Leave a Reply

Your email address will not be published. Required fields are marked *

error: Content is protected !!