ಹನುಮಂತ ನಗರ (ಜೆ.ಡಿ. ಕೋಟೆ): ಹೆಚ್‌ಡಿ ಕೋಟೆ ತಾಲೂಕಿನ ಹನುಮಂತ ನಗರದಲ್ಲಿ ಪತಿಯೇ ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿರುವ ಘಟನೆ ನಡೆದಿದೆ.
ಮೂಲತಃ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಿಬಿ ತಾಂಡಾದ ನಿವಾಸಿ ಮಲ್ಲೇಶ್ ನಾಯ್ಕ್, ಬಿಬಿ ತಾಂಡಾದವರೇ ಆದ ಮಧುರಾಳನ್ನು ವರ್ಷಗಳ ಹಿಂದೆ ವಿವಾಹವಾಗಿದ್ದ. ಮಧುರಾ ಮೇಲೆ ಮಲ್ಲೇಶ್ ನಾಯ್ಕ್ ಹಿಂದಿನಿಂದಲೂ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಅಲ್ಲದೆ, ಅವಳ ಮೇಲೆ ಅನುಮಾನ ತೋರಿಸುತ್ತಿದ್ದ.
ಪ್ರತಿ ದಿನ ಕುಡಿದು ಬರುವ ಮಲ್ಲೇಶ್ ತನ್ನ ಪತ್ನಿಯ ತವರು ಮನೆಯಿಂದ ಸೈಟ್ ಕೊಡಿಸಲು ಒತ್ತಾಯಿಸಿ, ಗಲಾಟೆ ಮಾಡುತ್ತಿದ್ದ. ಗಂಡನ ಈ ಅವ್ಯವಸ್ಥೆಯಿಂದ ಬೇಸತ್ತ ಮಧುರಾ, ಕೆಲವು ದಿನಗಳ ಮಟ್ಟಿಗೆ ತವರು ಮನೆಗೆ ತೆರಳಿ ಬಂದಿದ್ದರು.
ಈ ಘಟನೆಗೆ ಕೋಪಗೊಂಡ ಮಲ್ಲೇಶ್ ನಾಯ್ಕ್ ಮಗನ ಸಮ್ಮುಖದಲ್ಲೇ ಪತ್ನಿ ಮಧುರಾಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ತೀವ್ರವಾಗಿ ಗಾಯಗೊಂಡ ಮಧುರಾಳನ್ನು ತಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ಮಲ್ಲೇಶ್ ನಾಯ್ಕ್ ಹೆಚ್‌ಡಿ ಕೋಟೆಯ ಕೆಎಸ್‌ಆರ್‌ಟಿಸಿ ಡಿಪೊದಲ್ಲಿ ಮೆಕ್ಯಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಘಟನೆಯ ಸಂಬಂಧ ಹೆಚ್‌ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.