ಕುಂದಗೋಳ: ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದಲ್ಲಿ ಸ್ವಚ್ಛತೆಗೆ ಸಂಬಂಧಿಸಿದ ಸಮಸ್ಯೆಗಳು ತೀವ್ರ ಸ್ವರೂಪ ತಾಳುತ್ತಿದ್ದು, ಗ್ರಾಮ ಪಂಚಾಯಿತಿ ಮುಂಭಾಗದ ರಸ್ತೆಗಳು ಕಸದ ರಾಶಿಗಳಿಂದ ಕೂಡಿದ್ದು, ದುರ್ವಾಸನೆಯಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ.  ಹಿರೇನರ್ತಿ ಗ್ರಾಮದಿಂದ ಕುಂದಗೋಳ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಸುತ್ತಮುತ್ತ ಕಸದ ರಾಶಿಗಳು ತುಂಬಿ ನಿಂತಿದ್ದು, ಸ್ವಚ್ಛತೆಯ ಕೊರತೆಯಿಂದ ಗ್ರಾಮೀಣ ಪರಿಸರದ ಸೌಂದರ್ಯ ಹಾಳಾಗಿದೆ. ಶಾಲೆ, ಬಸ್ ನಿಲ್ದಾಣ, ಮತ್ತು ಗ್ರಾಮ ಪಂಚಾಯತಿ ಕಛೇರಿಗಳಂತಹ ಸಾರ್ವಜನಿಕ ಸ್ಥಳಗಳ ಬಳಿಯೇ ಕಸ ಸಂಗ್ರಹಣೆ ನಡೆದಿದ್ದು, ನಿರ್ವಹಣೆ ಕೊರತೆಯ ಕಾರಣವಾಗಿ ಸಮಸ್ಯೆ ತೀವ್ರವಾಗಿದೆ.

ನಿರ್ಲಕ್ಷ್ಯದ ದುರಂತರ ಸ್ವರೂಪ
ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದಂತೆಯೇ, ಗ್ರಾಮದಲ್ಲಿ ಹಲವೆಡೆ ಕಸದ ರಾಶಿಗಳು ಸಮಯಕ್ಕೆ ಸರಿಯಾಗಿ ವಿಲೇವಾರಿಯಾಗುತ್ತಿಲ್ಲ. ಹಂದಿಗಳ ತಾಣವಾಗಿ ಮಾರ್ಪಟ್ಟಿರುವ ಈ ಸ್ಥಳಗಳು ದುರ್ವಾಸನೆ ಬೀರುತ್ತಿದ್ದು, ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಸ್ವಚ್ಛತೆಯ ಕೊರತೆಯಿಂದ ಗ್ರಾಮಸ್ಥರಲ್ಲಿ ಆಕ್ರೋಶ ತೀವ್ರಗೊಂಡಿದ್ದು, ಗ್ರಾಮ ಪಂಚಾಯತಿ ಆಡಳಿತದ ನಿರ್ಲಕ್ಷ್ಯ ಕುರಿತು ತೀವ್ರವಾಗಿ ಚರ್ಚೆ ನಡೆಯುತ್ತಿದೆ.

ಮಹಿಳಾ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಆರೋಪ
ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯಾದ ಶೈಲಾ ನೀಲಗಾರ ಅವರನ್ನು ಕರ್ತವ್ಯದ ಕುರಿತು ಪ್ರಶ್ನೆ ಮಾಡಿದ್ದಾರೆ. “ಸರ್ಕಾರ ಕೈಗೊಂಡ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 136 ಲಕ್ಷ ರೂಪಾಯಿ ಕಾರ್ಮಿಕ ವೆಚ್ಚ ಮತ್ತು 101 ಲಕ್ಷ ರೂಪಾಯಿ ಸಾಮಗ್ರಿ ವೆಚ್ಚ ಮೀಸಲಾಗಿದ್ದರೂ, ಈ ಹಣವನ್ನು ಸ್ವಚ್ಛತೆ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತಿಲ್ಲವಾ?” ಎಂಬ ಪ್ರಶ್ನೆ ಗ್ರಾಮಸ್ಥರು ಮಾಡುತ್ತಿದ್ದಾರೆ.

ಅಧಿಕಾರಿ ಪ್ರತಿಕ್ರಿಯೆ
ಅಧಿಕಾರಿ ಶೈಲಾ ನೀಲಗಾರ ಅವರು, “ಗ್ರಾಮದ ಒಳಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದೇವೆ. ಹೊರವಲಯದಲ್ಲಿ ಸ್ವಚ್ಛತೆಗಾಗಿ ಸಿಬ್ಬಂದಿಗೆ ಆದೇಶ ನೀಡುತ್ತೇವೆ. ಹಂದಿಗಳನ್ನು ಸ್ಥಳದಿಂದ ಕರೆದುಕೊಂಡು ಹೋಗಲು ಮಾಲೀಕರಿಗೆ ಸೂಚನೆ ನೀಡಿದ್ದೇವೆ,” ಎಂದು ಸ್ಪಷ್ಟನೆ ನೀಡಿದ್ದಾರೆ.

ಪ್ರಶ್ನೆಗಳು ಮತ್ತು ನಿರೀಕ್ಷೆ
ಹಿರೇನರ್ತಿ ಗ್ರಾಮದಲ್ಲಿ ಸ್ಥಳೀಯ ಆಡಳಿತದ ಅವ್ಯವಸ್ಥೆ ಸಂಬಂಧಿಸಿದಂತೆ ಜನರು ಗಂಭೀರ ಪ್ರಶ್ನೆಗಳನ್ನು ಮಾಡುತ್ತಿದ್ದು, ಸರ್ಕಾರದಿಂದ ನೀಡಲಾದ ಅನುದಾನವನ್ನು ಸೂಕ್ತವಾಗಿ ಬಳಸಲಾಗದಿರುವುದರಿಂದ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು ಆಡಳಿತ ಮಂಡಳಿಯು ಪ್ರಯತ್ನಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ವರದಿ: ಶಾನು ಯಲಿಗಾರ

Leave a Reply

Your email address will not be published. Required fields are marked *

error: Content is protected !!