ದಾವಣಗೆರೆಯ ಜನನಿಬಿಡ ಮತ್ತು ವ್ಯಾಪಾರ ಹಬ್ಬಿರುವ ಎನ್.ಆರ್. ರಸ್ತೆಯಲ್ಲಿ ಚಿನ್ನಾಭರಣ ಅಂಗಡಿಯಲ್ಲಿ ಕಳ್ಳತನ ನಡೆದಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಇಲ್ಲಿನ ಹೆಚ್.ಕೆ.ಎ. ಜುವೆಲ್ಲರ್ಸ್ ಅಂಗಡಿಗೆ ಕಳ್ಳರು ಶಟರ್ ಮುರಿದು ಒಳ ಪ್ರವೇಶಿಸಿ, ದೊಡ್ಡ ಪ್ರಮಾಣದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಬೆಳಿಗ್ಗೆ ಅಂಗಡಿ ತೆರೆಯಲು ಬಂದ ಮಾಲಿಕರಿಗೆ ಕಳ್ಳತನದ ವಿಷಯ ಗೊತ್ತಾಗಿದ್ದು, ತಕ್ಷಣವೇ ಬಸವನಗರ ಠಾಣೆಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಘಟನೆಯ ಪರಿಶೀಲನೆ ನಡೆಸಿ, ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿದ್ದಾರೆ. ಕಳವಾದ ಚಿನ್ನಾಭರಣಗಳ ಬಗ್ಗೆ ಮಾಲಿಕರಿಂದ ಮಾಹಿತಿ ಸಂಗ್ರಹಿಸುತ್ತಿದ್ದು, ಕಳ್ಳರನ್ನು ಪತ್ತೆಹಚ್ಚಲು ವಿಶೇಷ ತಂಡವನ್ನು ರಚಿಸಲಾಗಿದೆ.
ಈ ಘಟನೆ ವ್ಯಾಪಾರಿ ಸಮುದಾಯದಲ್ಲಿ ಆತಂಕ ಉಂಟುಮಾಡಿದ್ದು, ಭದ್ರತಾ ವ್ಯವಸ್ಥೆ ಬಲಪಡಿಸುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದು, ಶೀಘ್ರದಲ್ಲೇ ಕಳ್ಳರನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.