
ಚಿಕ್ಕಬಳ್ಳಾಪುರ: ರಾಜ್ಯ ಸೇರಿದಂತೆ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದ ವಿವಿಧೆಡೆಗಳಲ್ಲಿ ದರೋಡೆ, ಕೊಲೆ, ಸುಲಿಗೆ, ಕಳ್ಳತನ ಮತ್ತು ಅಪಹರಣ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಅಪರಾಧಿ ಮಹಮ್ಮದ್ ಖಲೀಲ್ ವುಲ್ಲಾ ಆಲಿಯಾಸ್ ಬಾಂಬೆ ಸಲೀಂ ಬಾಗೇಪಲ್ಲಿ ಪೊಲೀಸರ ಕಾರ್ಯಾಚರಣೆಯಲ್ಲಿ ಶನಿವಾರ ಬಂಧಿತನಾಗಿದ್ದಾನೆ. ಆತನೊಂದಿಗೆ ಮತ್ತೂ 7 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಹುಪಾಲು ರಾಜ್ಯಗಳಲ್ಲಿ ಪ್ರಕರಣಗಳು ದಾಖಲು
ಬಾಂಬೆ ಸಲೀಂನ ವಿರುದ್ಧ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ 5 ಕೊಲೆ, 4 ಡಕಾಯಿತಿ, 2 ಸುಲಿಗೆ, 2 ಅಪಹರಣ ಸೇರಿದಂತೆ 20ಕ್ಕೂ ಅಧಿಕ ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ.
ಅಶ್ವತ್ಥನಾರಾಯಣಸ್ವಾಮಿ ಅಪಹರಣ ಪ್ರಕರಣ
2024ರ ಡಿಸೆಂಬರ್ 20ರಂದು ಗುಡಿಬಂಡೆ ತಾಲೂಕಿನ ಗಂಗಾನಹಳ್ಳಿ ಗ್ರಾಮದ ಅಶ್ವತ್ಥನಾರಾಯಣಸ್ವಾಮಿ ಅವರು ತಮ್ಮ ಜಮೀನು ಮಾರಾಟ ಮಾಡಿ ಬಂದ ಹಣವನ್ನು ಸ್ನೇಹಿತರಿಗೆ ನೀಡಲು ಮಾರುತಿ ಸ್ವಿಫ್ಟ್ ಕಾರಿನಲ್ಲಿ ಹೊರಟಿದ್ದರು. ಆದಿಗಾನಹಳ್ಳಿ ಕ್ರಾಸ್ ಸಮೀಪದ ಪೆಟ್ರೋಲ್ ಬಂಕ್ ಹತ್ತಿರ ಕಾರಿನಲ್ಲಿ ಬಂದ ಬಾಂಬೆ ಸಲೀಂ ಮತ್ತು ಆತನ ಗುಂಪು ಅವರಿಗೆ ಅಡ್ಡಗಟ್ಟಿ, ಅವರನ್ನು ಅಪಹರಿಸಿ ₹16 ಲಕ್ಷ ದರೋಡೆ ಮಾಡಿದ್ದರು. ಬಳಿಕ ಸ್ವಾಮಿಯನ್ನು ಕಿಡ್ನಾಪ್ ಮಾಡಿದ್ದು, ಆತನ ಪತ್ನಿಗೆ ಕರೆ ಮಾಡಿ ಬಿಡುಗಡೆಗೆ ಹೆಚ್ಚುವರಿಯಾಗಿ ₹50 ಲಕ್ಷ ಕೊಡುವಂತೆ ಬೆದರಿಕೆ ಹಾಕಿದ್ದರು.
ಬಾಗೇಪಲ್ಲಿ ಪೊಲೀಸರ ಯಶಸ್ವಿ ಕಾರ್ಯಾಚರಣೆ
ಪ್ರಕರಣ ದಾಖಲಾದ ನಂತರ ಬಾಗೇಪಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಪ್ರಶಾಂತ್ ವರ್ಣಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಕೈಗೊಳ್ಳಲಾಯಿತು. ಪತ್ತೆ ಕಾರ್ಯಾಚರಣೆಯು ಕೊನೆಗೂ ಫಲ ನೀಡಿದ್ದು, ಹೆದ್ದಾರಿ ದರೋಡೆಕೋರರ ಗುಂಪು ಪೊಲೀಸರ ಬಲೆಗೆ ಬಿದ್ದಿದೆ.
ಆರೋಪಿಗಳಿಂದ ಅಪರಾಧಕ್ಕೆ ಬಳಸಿದ ವಸ್ತುಗಳ ವಶಕ್ಕೆ
ಬಂಧಿತರಿಂದ ₹30 ಲಕ್ಷ ಮೌಲ್ಯದ ಕಾರು, ₹5.15 ಲಕ್ಷ ನಗದು, ₹1 ಲಕ್ಷ ಮೌಲ್ಯದ ದ್ವಿಚಕ್ರ ವಾಹನ, ಡಕಾಯಿತಿಗೆ ಬಳಸಿದ ಮತ್ತೊಂದು ಬೈಕ್, ಚಾಕು, ಮಚ್ಚು, ಕಬ್ಬಿಣದ ಸಲಾಕೆ ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
ರಾಜ್ಯಾದ್ಯಂತ ಅಪರಾಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಬಾಂಬೆ ಸಲೀಂನ ಬಂಧನದಿಂದ ಹಲವು ನಿಗೂಢ ಪ್ರಕರಣಗಳಿಗೆ ಬೆಳಕು ಬೀಳುವ ನಿರೀಕ್ಷೆ ವ್ಯಕ್ತವಾಗಿದೆ.