ಮೈಸೂರಿನ ವಿಶ್ವೇಶ್ವರಯ್ಯನಗರದ ಅಪಾರ್ಟ್ಮೆಂಟ್‌ನಲ್ಲಿ ಒಂದು ಕುಟುಂಬದ ನಾಲ್ವರು  ಸಾವನ್ನಪ್ಪಿದ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಮೃತರು ಕುಶಾಲ್ (15), ಚೇತನ್ (45), ರೂಪಾಲಿ (43) ಮತ್ತು ಪ್ರಿಯಂವಧಾ (62) ಎಂದು ಗುರುತಿಸಲಾಗಿದೆ. ಈ ದಾರುಣ ಘಟನೆಯಲ್ಲಿ ಚೇತನ್ ಮೊದಲಿಗೆ ತಾಯಿ, ಪತ್ನಿ ಮತ್ತು ಮಗನಿಗೆ ವಿಷ ನೀಡಿ ಬಳಿಕ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಘಟನಾ ವಿವರ:
ಮೃತ ಚೇತನ್ ಹಾಸನ ಜಿಲ್ಲೆಯ ಗೊರೂರು ಮೂಲದವರು, 2019 ರಿಂದ ಮೈಸೂರಿನಲ್ಲಿ ನೆಲೆಸಿದ್ದರು. ಅವರು ವಿದೇಶಕ್ಕೆ ಕಾರ್ಮಿಕರನ್ನು ಕಳುಹಿಸುವ ಉದ್ಯಮದಲ್ಲಿದ್ದರು. ಅವರ ಪತ್ನಿ ರೂಪಾಲಿ ಮೈಸೂರಿನವರಾಗಿದ್ದರು. ಕುಟುಂಬವು ಶನಿವಾರ ಗೊರೂರು ದೇವಾಲಯಕ್ಕೆ ಭೇಟಿ ನೀಡಿ, ಭಾನುವಾರ ಸಂಜೆ ಮನೆಗೆ ಮರಳಿದ್ದರೆಂದು ಮಾಹಿತಿ ಲಭ್ಯವಾಗಿದೆ.

ಪೊಲೀಸ್ ತನಿಖೆ:
ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಡಿಸಿಪಿ ಜಾಹ್ನವಿ, ವಿದ್ಯಾರಣ್ಯಪುರಂ ಪೊಲೀಸ್ ಇನ್ಸ್‍ಪೆಕ್ಟರ್ ಮೋಹಿತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ಮುಂದುವರಿಯುತ್ತಿದೆ.

ಡೆತ್ ನೋಟ್:
ಪೊಲೀಸರು ಮನೆಯಲ್ಲಿರುವ ಡೆತ್ ನೋಟ್ ಪತ್ತೆ ಮಾಡಿದ್ದು, ಅದರಲ್ಲಿ ಚೇತನ್ ತಮ್ಮ ಸಾವಿಗೆ ಹಣಕಾಸಿನ ಸಮಸ್ಯೆಯೇ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ. “ನಮ್ಮ ಸಾವಿಗೆ ಯಾರೂ ಹೊಣೆಗಾರರಲ್ಲ. ನಮ್ಮ ಸ್ನೇಹಿತರು, ಸಂಬಂಧಿಕರಿಗೆ ತೊಂದರೆ ಕೊಡಬೇಡಿ. ಕ್ಷಮಿಸಿ, I AM SORRY” ಎಂದು ಚೇತನ್ ಡೆತ್ನೋಟ್‌ನಲ್ಲಿ ಬರೆದಿರುವುದು ಬೆಳಕಿಗೆ ಬಂದಿದೆ.

ಈ ದುರ್ಘಟನೆಯಿಂದ ಆತನ ಸ್ನೇಹಿತರು, ಕುಟುಂಬಸ್ಥರು ಮತ್ತು ನೆರೆಹೊರೆಯವರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.

error: Content is protected !!