ಬಾಗಲಕೋಟೆ: ತಾಲೂಕಿನ ನಾಯನೇಗಲಿ ಗ್ರಾಮದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ಹಾಗೂ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ ಸೇರಿ ವಿವಿಧ ಮೂಲಭೂತ ಸೌಕರ್ಯಗಳು ಇಲ್ಲದ ಕಾರಣ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಈ ವೇಳೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಧಿಕ್ಕಾರ ಕೂಗುತ್ತಾ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ನಮಗೆ ಮುಖ್ಯವಾಗಿ ಉಪನ್ಯಾಸಕರ ಕೊರತೆಯಿದ್ದು ಆದಷ್ಟು ಬೇಗನೆ ಕೊರತೆ ನೀಗಿಸಬೇಕು ಇಲ್ಲದಿದ್ದರೆ ಇದಕ್ಕಿಂತ ದೊಡ್ಡ ಪ್ರತಿಭಟನೆ ನಡೆಸುತ್ತೇವೆಂದು ತಿಳಿಸಿದರು.
ಈ ಪ್ರತಿಭಟನೆಯನ್ನು ತಡೆಯಬೇಕೆಂದು ಕೆಲ ಉಪನ್ಯಾಸಕರು ಹಾಗೂ ಪೋಲೀಸ್ ಅಧಿಕಾರಿಗಳು ಹರಸಾಹಸ ಪಟ್ಟರು ಸಹ ಯಾವುದಕ್ಕೂ ಜಗ್ಗದ ವಿದ್ಯಾರ್ಥಿಗಳು, ಪಟ್ಟು ಹಿಡಿದು ಮೇಲಾಧಿಕಾರಿಗಳು ಬಂದು ನಮಗೆ ನ್ಯಾಯ ಒದಗಿಸುವ ವರೆಗೂ ನಮ್ಮ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ತಿಳಿಸಿದರು. ಈ ವಿಷಯವನ್ನು ಅರಿತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಭೇಟಿ ನೀಡಿ ವಿದ್ಯಾರ್ಥಿಗಳ ತೊಂದರೆಗಳನ್ನು ಆಲಿಸಿ ಅವರಿಗೆ ಉಪನ್ಯಾಸಕರ ವ್ಯವಸ್ಥೆ ಹಾಗೂ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಎರಡು ದಿನಗಳಲ್ಲಿ ಕಲ್ಪಿಸಿಕೊಡುತ್ತೇವೆಂದು ಆಶ್ವಾಸನೆ ನೀಡಿದ ಮೇಲೆ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಕೈ ಬಿಟ್ಟರು.
ಆದಷ್ಟು ಬೇಗನೆ ನಮ್ಮ ತೊಂದರೆಗಳಿಗೆ ಸ್ಪಂದಿಸದಿದ್ದರೆ ಇದಕ್ಕಿಂತ ದೊಡ್ಡ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳ, ಪೋಲೀಸ್ ಇಲಾಖೆ, ಹಾಗೂ ಊರಿನ ಹಿರಿಯರ ಸಮ್ಮುಖದಲ್ಲೇ ತಿಳಿಸಿದರು.
ವರದಿ: ವಿಶ್ವನಾಥ ಭಜಂತ್ರಿ