ರಷ್ಯಾ-ಉಕ್ರೇನ್‌ ಯುದ್ಧ ತೀವ್ರಗೊಳ್ಳುತ್ತಲೇ ಇದ್ದು, ಉಕ್ರೇನ್‌ ರಷ್ಯಾದ ರಾಜಧಾನಿ ಮಾಸ್ಕೋವಿನ ವಿರುದ್ಧ ಭಾರೀ ಡ್ರೋನ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ಒಬ್ಬರು ಮೃತಪಟ್ಟಿದ್ದು, 9ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಷ್ಯಾದ 10ಕ್ಕೂ ಹೆಚ್ಚು ಪ್ರದೇಶಗಳ ಮೇಲೆ ಉಕ್ರೇನ್‌ ಡ್ರೋನ್‌ಗಳ ಸುರಿಮಳೆಯನ್ನೇ ಸುರಿಸಿದೆ.

ಈ ದಾಳಿಯು ಉಕ್ರೇನ್‌ ಕಳೆದ ಮೂರು ವರ್ಷಗಳಲ್ಲಿ ರಷ್ಯಾ ವಿರುದ್ಧ ನಡೆಸಿದ ಅತ್ಯಂತ ದೊಡ್ಡ ಡ್ರೋನ್ ದಾಳಿ ಎಂದು ಹೇಳಲಾಗುತ್ತಿದೆ. ರಷ್ಯಾದ ವಾಯು ರಕ್ಷಣಾ ಪಡೆಗಳು ಈ ದಾಳಿಗೆ ತಕ್ಷಣ ಪ್ರತಿಕ್ರಿಯೆ ನೀಡಿದ್ದು, ಅರ್ಧರಾತ್ರಿ ವೇಳೆಗೆ ಬರೋಬ್ಬರಿ 337 ಉಕ್ರೇನ್‌ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾದ ಸೇನೆ ಹೇಳಿದೆ.

ಅಮೆರಿಕ-ಉಕ್ರೇನ್ ಚರ್ಚೆಯ ಮುಂಚಿನ ದಾಳಿ

ಈ ದಾಳಿ ಅಮೆರಿಕ-ಉಕ್ರೇನ್‌ ನಡುವಿನ ಮಹತ್ವದ ಸಭೆಯ ಕೆಲವೇ ಗಂಟೆಗಳ ಮುಂಚೆ ನಡೆದಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಉಕ್ರೇನ್‌ ನಿಯೋಗ ಮಂಗಳವಾರ (ಮಾರ್ಚ್ 11) ಸೌದಿ ಅರೇಬಿಯಾದಲ್ಲಿ ಅಮೆರಿಕದ ಉನ್ನತ ರಾಜತಾಂತ್ರಿಕರನ್ನು ಭೇಟಿಯಾಗಲಿದ್ದು, ಈ ಸಂದರ್ಶನ ಯುದ್ಧ ಮುಗಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ. ಆದರೆ ಈಗ ನಡೆದ ಭಾರೀ ದಾಳಿಯಿಂದ ಉಕ್ರೇನ್‌ಗೆ ಯುದ್ಧ ಮುಗಿಸುವ ಮನಸ್ಸು ಇದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಅಮೆರಿಕ-ಉಕ್ರೇನ್‌ ಸಂಬಂಧದಲ್ಲಿ ಬಿರುಕು?

ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಇತ್ತೀಚೆಗೆ ಅಮೆರಿಕದ ಶ್ವೇತ ಭವನಕ್ಕೆ ಭೇಟಿ ನೀಡಿದ್ದರು, ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರೊಂದಿಗೆ ಅವರ ಮಾತುಕತೆ ಅಷ್ಟು ಅನುಕೂಲಕರವಾಗಿರಲಿಲ್ಲ. ಅಷ್ಟೇ ಅಲ್ಲದೆ, ಉಕ್ರೇನ್‌ನ ಖನಿಜ ಸಂಪತ್ತುಳ್ಳ ಪ್ರದೇಶಗಳನ್ನು ಬಿಟ್ಟುಕೊಡಲು ಅಮೆರಿಕ ಒತ್ತಾಯಿಸಿದ್ದರಿಂದ ಉಕ್ರೇನ್‌ ಬೇಸರಗೊಂಡಿತ್ತು.

ಈ ಹಿನ್ನೆಲೆಯಲ್ಲಿ, ಉಕ್ರೇನ್‌ ರಷ್ಯಾ ವಿರುದ್ಧ ಏಕಾಏಕಿ ಹೂಡಿದ ಭಾರೀ ದಾಳಿಯು ಅಮೆರಿಕದ ಮೇಲೆ ಉಕ್ರೇನ್‌ ಮೂಡಿದ ಅಸಮಾಧಾನದ ಪ್ರತೀಕವೇ? ಎಂಬ ಪ್ರಶ್ನೆಗಳು ಎದ್ದಿರುವುದು ಗಮನಾರ್ಹ. ದಾಳಿಯ ಕುರಿತು ಉಕ್ರೇನ್‌ನಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ.

Leave a Reply

Your email address will not be published. Required fields are marked *

Related News

error: Content is protected !!