ರಷ್ಯಾದ ಸರ್ಕಸ್ ಆನೆಯೊಂದು ತನ್ನ 25 ವರ್ಷಗಳ ಸಹಚರನ ಅಗಲಿಕೆಗೆ ಮರುಗಿದ ಭಾವನಾತ್ಮಕ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮ್ಯಾಗ್ಡಾ ಎಂಬ ಆನೆ, ತನ್ನ ದೀರ್ಘಕಾಲದ ಸಂಗಾತಿ ಜೆನ್ನಿ ಸಾವಿಗೆ ಕಣ್ಣೀರಿಟ್ಟ ದುಃಖದ ಕ್ಷಣವೇ ಇದಾಗಿದೆ.

ಜೆನ್ನಿಯ ಅಗಲಿಕೆಗೆ ಮ್ಯಾಗ್ಡಾದ ಭಾವನಾತ್ಮಕ ಪ್ರತಿಕ್ರಿಯೆ

ಮ್ಯಾಗ್ಡಾ ಮತ್ತು ಜೆನ್ನಿ 25 ವರ್ಷಗಳಿಗೂ ಹೆಚ್ಚು ಕಾಲ ಒಟ್ಟಿಗೆ ಸರ್ಕಸ್ ಪ್ರದರ್ಶನಗಳನ್ನು ನೀಡಿದ ಜೋಡಿ ಆನೆಗಳಾಗಿದ್ದು, ಇತ್ತೀಚೆಗೆ ಜೆನ್ನಿ ಕುಸಿದು ಬಿದ್ದು ಸಾವನ್ನಪ್ಪಿದಳು. ಮ್ಯಾಗ್ಡಾ, ತನ್ನ ಗೆಳತಿಯ ಪಕ್ಕದಲ್ಲೇ ಗಂಟೆಗಟ್ಟಲೆ ನಿಂತು ದುಃಖವನ್ನು ವ್ಯಕ್ತಪಡಿಸಿತು.

ವಿಡಿಯೋ ದೃಶ್ಯಗಳಲ್ಲಿ ಮ್ಯಾಗ್ಡಾ ಮೊದಲು ಜೆನ್ನಿಯನ್ನು ತಟ್ಟಿ ಎಬ್ಬಿಸಲು ಪ್ರಯತ್ನಿಸುವುದು, ಬಳಿಕ ಅವಳ ಸೊಂಡಿಲಿನಿಂದ ಸುತ್ತುವರೆದು, ಅವಳನ್ನು ಬಿಟ್ಟು ಹೋಗಲು ಮನಸ್ಸಿಲ್ಲದೆ ಪಕ್ಕದಲ್ಲೇ ನಿಂತಿರುವುದು ಕಾಣಬಹುದು. ಪಶುವೈದ್ಯರು ಹತ್ತಿರ ಬರುವುದನ್ನು ತಡೆಯುತ್ತಿದ್ದ ಮ್ಯಾಗ್ಡಾದ ಭಾವನೆಗಳು ಸಾಕಷ್ಟು ಜನರ ಹೃದಯಕ್ಕೆ ತಟ್ಟಿವೆ.

ಸಮಾಜಿಕ ಜಾಲತಾಣದಲ್ಲಿ ಭಾವುಕರ ಪ್ರತಿಕ್ರಿಯೆ

ಈ ದೃಶ್ಯ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಆನೆಗಳ ಬಾಂಧವ್ಯವನ್ನು ಶ್ಲಾಘಿಸಿದ್ದಾರೆ.

“ಪ್ರೀತಿಗೆ ಯಾವುದೇ ಮಿತಿಯಿಲ್ಲ” ಎಂದು ಒಬ್ಬರು ಬರೆದರೆ,

“ಮಾನವರನ್ನು ಹೊರತುಪಡಿಸಿ, ಅಂತ್ಯಕ್ರಿಯೆಯ ವಿಧಿಗಳನ್ನು ಮಾಡುವ ಏಕೈಕ ಸಸ್ತನಿ ಆನೆಗಳು. ಅವು ತುಂಬಾ ಬುದ್ಧಿವಂತ ಹಾಗೂ ಭಾವನಾತ್ಮಕ” ಎಂದು ಮತ್ತೊಬ್ಬರು ಹೇಳಿದ್ದಾರೆ.

ಮ್ಯಾಗ್ಡಾ ಮತ್ತು ಜೆನ್ನಿಯ ಸಂಬಂಧ

25 ವರ್ಷಗಳ ಸಹವಾಸದಲ್ಲೂ, ಮ್ಯಾಗ್ಡಾ ಮತ್ತು ಜೆನ್ನಿಯ ನಡುವೆಯೂ ಕೆಲ ಭಿನ್ನಾಭಿಪ್ರಾಯಗಳೂ ಇತ್ತ. 2021 ರಲ್ಲಿ ನಿವೃತ್ತಿಯಾಗುವ ಮೊದಲು, ಈ ಜೋಡಿ ರಷ್ಯಾದ ಕಜಾನ್ ನಗರದಲ್ಲಿ ಬಹುತೇಕ ತಮ್ಮ ವೃತ್ತಿಜೀವನ ಕಳೆದಿದ್ದವು. ಒಂದು ಪ್ರದರ್ಶನದ ವೇಳೆ, ಜೆನ್ನಿ ಅಸಹನೆಗೊಂಡು ಮ್ಯಾಗ್ಡಾಗೆ ಗುದ್ದಿದ ಘಟನೆ ನಡೆದಿತ್ತು, ಇದರಿಂದ ಪ್ರೇಕ್ಷಕರಲ್ಲಿ ಆತಂಕ ಉಂಟಾಯಿತು. “ಇದು ಪ್ರೀತಿಯ ಸಹಚರನ ಅಭಿವ್ಯಕ್ತಿ – ಅಸೂಯೆ” ಎಂದು ಸರ್ಕಸ್ ಪ್ರತಿನಿಧಿಗಳು ಹೇಳಿದ್ದರು.

ಈ ಘಟನೆಗೆ ಒಂದು ವಾರದ ನಂತರ, ಎರಡೂ ಆನೆಗಳು ತಮ್ಮ ತರಬೇತುದಾರನ ಮೇಲೆ ದಾಳಿ ಮಾಡಿ ತೀವ್ರ ಗಾಯಗೊಳಿಸಿದ್ದವು. ತರಬೇತುದಾರನಿಗೆ ಬೆನ್ನು ಮೂಳೆ ಮುರಿತ, ಪಕ್ಕೆಲುಬು ಮುರಿತ ಮತ್ತು ಶ್ವಾಸಕೋಶಕ್ಕೆ ಗಾಯಗಳಾದವು. ಈ ಘಟನೆಯ ನಂತರ, ಅವುಗಳನ್ನು ನಿವೃತ್ತಿಗೊಳಿಸಲಾಯಿತು.

ಭಾವನಾತ್ಮಕ ವಿದಾಯ

ಜೆನ್ನಿಯ ಅಗಲಿಕೆಯಿಂದ ಮ್ಯಾಗ್ಡಾ ಅತೀವ ದುಃಖಗೊಂಡಿದ್ದು, ಈ ಭಾವನಾತ್ಮಕ ಘಟನೆ ಪ್ರಪಂಚದಾದ್ಯಂತ ಜನರ ಗಮನ ಸೆಳೆದಿದೆ. ಆನೆಗಳ ಭಾವನಾತ್ಮಕ ಬುದ್ಧಿವಂತಿಕೆ ಹಾಗೂ ಅವುಗಳು ತೀವ್ರವಾದ ದುಃಖವನ್ನು ಅನುಭವಿಸಬಲ್ಲವು ಎಂಬುದಕ್ಕೆ ಇದು ಮತ್ತೊಂದು ನಿದರ್ಶನವಾಗಿದೆ.

Leave a Reply

Your email address will not be published. Required fields are marked *

error: Content is protected !!