ಮಹದೇವಪುರ ಸಂಚಾರ ಠಾಣೆಯ ಇನ್‌ಸ್ಪೆಕ್ಟರ್‌ ಅನಿತಾ ಕುಮಾರಿಯವರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು, ಹಲ್ಲೆ ನಡೆಸಿದ ಆರೋಪದ ಮೇಲೆ ಬ್ಯಾಂಕ್‌ ಉದ್ಯೋಗಿ ಮತ್ತು ಆತನ ಸ್ನೇಹಿತೆಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರು?
ಬಂಧಿತರನ್ನು ಬಿ.ನಾರಾಯಣಪುರ ನಿವಾಸಿ ರಾಕೇಶ್‌ ಕುಮಾರ್‌ (35) ಮತ್ತು ಆತನ ಸ್ನೇಹಿತೆ ಬೈಸಾಕಿ (30) ಎಂದು ಗುರುತಿಸಲಾಗಿದೆ. ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಡಿ ಮಹದೇವಪುರ ಪೊಲೀಸರು ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ.

ಘಟನೆ ಹೇಗೆ ನಡೆಯಿತು?
ಶನಿವಾರ ತಡರಾತ್ರಿ 12 ಗಂಟೆ ಸುಮಾರಿಗೆ ಮಹದೇವಪುರ ಸಂಚಾರ ಠಾಣೆಯ ಪಿಐ ಅನಿತಾ ಕುಮಾರಿ, ಸಿಂಗನಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಡ್ರಂಕ್‌ ಅಂಡ್‌ ಡ್ರೈವ್‌ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ರಾಮಮೂರ್ತಿನಗರದಿಂದ ಸಿಂಗನಪಾಳ್ಯ ಕಡೆಗೆ ಬುಲೆಟ್‌ನಲ್ಲಿ ತೆರಳುತ್ತಿದ್ದ ರಾಕೇಶ್‌ ಕುಮಾರ್‌ ಮತ್ತು ಬೈಸಾಕಿಯನ್ನು ಪೊಲೀಸರು ತಡೆದು, ಮದ್ಯಪಾನದ ಪರೀಕ್ಷೆ ನಡೆಸಿದರು.

ಪರೀಕ್ಷೆಯಲ್ಲಿ ರಾಕೇಶ್‌ ಕುಮಾರ್‌ ಮದ್ಯ ಸೇವಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ನಿಯಮಾನುಸಾರ ದಂಡ ವಿಧಿಸಿ ಬುಲೆಟ್‌ ಜಪ್ತಿ ಮಾಡಲಾಯಿತು. ಡ್ರಂಕ್‌ ಅಂಡ್‌ ಡ್ರೈವ್‌ ಪ್ರಕರಣದಲ್ಲಿ ದಂಡವನ್ನು ಆನ್‌ಲೈನ್‌ ಅಥವಾ ಕೋರ್ಟ್‌ನಲ್ಲಿ ಪಾವತಿಸಿದ ನಂತರ ವಾಹನ ಹಿಂತಿರುಗಿಸಬಹುದೆಂದು ಪೊಲೀಸರೊಬ್ಬರು ಅವರಿಗೆ ತಿಳಿಸಿದರು.

ಕೋಪಗೊಂಡ ಆರೋಪಿ ಜೋಡಿ ಪೊಲೀಸರ ಮೇಲೆ ಹಲ್ಲೆ
ಈ ನಿರ್ಧಾರದಿಂದ ಕೋಪಗೊಂಡ ರಾಕೇಶ್‌ ಕುಮಾರ್‌, ತನ್ನ ಬುಲೆಟ್‌ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡನು. ಆದರೆ, ನಿಯಮಗಳ ಪ್ರಕಾರ ಮದ್ಯ ಸೇವಿಸಿರುವ ಕಾರಣ ವಾಹನ ನೀಡಲು ಸಾಧ್ಯವಿಲ್ಲವೆಂದು ಪೊಲೀಸರು ಸ್ಪಷ್ಟಪಡಿಸಿದರು. ಇದರಿಂದ ಸಿಟ್ಟಿಗೊಂಡ ಬೈಸಾಕಿ, ಸುಮಾರು ಅರ್ಧ ಗಂಟೆಗಳ ಕಾಲ ಪಿಐ ಅನಿತಾ ಕುಮಾರಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದಳು ಮತ್ತು ಅವರ ಮೇಲೆ ಹಲ್ಲೆ ನಡೆಸಿದಳು. ಈ ವೇಳೆ ರಾಕೇಶ್‌ ಕೂಡ ಪೊಲೀಸರೊಂದಿಗೆ ಕೈಹಾಕಿದನು.

ಆರೋಪಿಗಳ ವೈದ್ಯಕೀಯ ಪರೀಕ್ಷೆ ಮತ್ತು ಹಿನ್ನೆಲೆ
ಘಟನೆಯ ನಂತರ ಸ್ಥಳದಲ್ಲಿದ್ದ ಇತರೆ ಪೊಲೀಸ್ ಸಿಬ್ಬಂದಿ ಇಬ್ಬರನ್ನೂ ವಶಕ್ಕೆ ಪಡೆದು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಿದಾಗ, ಅವರು ಕಂಠಪೂರ್ತಿ ಮದ್ಯ ಸೇವಿಸಿರುವುದು ದೃಢಪಟ್ಟಿದೆ.

ಪಶ್ಚಿಮ ಬಂಗಾಳ ಮೂಲದ ರಾಕೇಶ್‌ ಕುಮಾರ್‌ ಖಾಸಗಿ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದು, ಪತ್ನಿ ಮತ್ತು ಮಕ್ಕಳ ಜತೆ ಬಿ.ನಾರಾಯಣಪುರದಲ್ಲಿ ವಾಸವಿದ್ದ. ಬೈಸಾಕಿಯು ಕೂಡ ಮದುವೆಯಾದ ಮಹಿಳೆಯಾಗಿದ್ದು, ಪತಿ ಮತ್ತು ಮಕ್ಕಳ ಜತೆ ಅದೇ ಪ್ರದೇಶದಲ್ಲಿ ವಾಸವಿದ್ದಳು. ಶನಿವಾರ ರಾತ್ರಿ ಇಬ್ಬರೂ ಪಾರ್ಟಿಯೊಂದಕ್ಕೆ ತೆರಳಿ ಮದ್ಯ ಸೇವಿಸಿ ಬುಲೆಟ್‌ನಲ್ಲಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ.

ಮಹದೇವಪುರ ಠಾಣೆ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿ ಜೋಡಿಯನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!