
ಅಂಕೋಲಾ: ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿದ್ದ ಐಆರ್‌ಬಿ ಕಂಪನಿಯ ಎಂಟು ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ನ್ಯಾಯಾಲಯದ ಆದೇಶ ಹೊರಡಿಸಿದರೂ ಮೌನವಾಗಿರುವ ಪೊಲೀಸರ ವಿರುದ್ಧ ಪ್ರಣವಾನಂದ ಸ್ವಾಮೀಜಿ ಕಿಡಿಕಾರಿದ್ದಾರೆ. ಅಂಕೋಲಾ ಪೊಲೀಸ ಠಾಣೆ ಎದುರು ಅವರು ಮಂಗಳವಾರ ಪ್ರತಿಭಟಿಸಿ, ಆಕ್ರೋಶ ವ್ಯಕ್ತಪಡಿಸಿದರು.
ಬ್ರಹ್ಮರ್ಷಿ ನಾರಾಯಣ ಗುರು ಶಕ್ತಿ ಪೀಠದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ಆಕ್ರೋಶದ ಬೆನ್ನಲ್ಲೆ ಪೊಲೀಸರು ಐಆರ್‌ಬಿ ಕಂಪನಿಯ ಎಂಟು ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿದರು. `ಪ್ರಕರಣ ದಾಖಲಿಸಲು ನ್ಯಾಯಾಲಯ ಸೂಚಿಸಿ 24 ದಿನ ಕಳೆದರೂ ಪೊಲೀಸರು ಎಫ್‌ಐಆರ್ ದಾಖಲಿಸಿರಲಿಲ್ಲ’ ಎಂದು ಸ್ವಾಮೀಜಿ ಅಸಮಧಾನ ವ್ಯಕ್ತಪಡಿಸಿದರು.
ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ದೊರೆತಿಲ್ಲ. ಅವೈಜ್ಞಾನಿಕ ಕಾಮಗಾರಿ ಕೈಗೊಂಡು ಗುಡ್ಡ ಕುಸಿತಕ್ಕೆ ಕಾರಣವಾಗಿದ್ದ ಐಆರ್‌ಬಿ ಕಂಪನಿ ವಿರುದ್ಧ ಕ್ರಮವಾಗಿಲ್ಲ. ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯ ಮೆಟ್ಟಿಲೇರಿದರು ಅವರು ಸ್ಪಂದಿಸಿಲ್ಲ. ಆದ್ದರಿಂದ ನ್ಯಾಯಾಲಯದ ಮೊರೆ ಹೋದೆವು. ಅಲ್ಲಿ ಐಆರ್‌ಬಿ ಕಂಪನಿಯ ಎಂಟು ಅಧಿಕಾರಿಗಳ ಮೇಲೆ ಎಫ್‌ಐಆರ್ ದಾಖಲಿಸುವಂತೆ ಆದೇಶ ನೀಡಿದ್ದರೂ ಯಾವುದೇ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ’ ಎಂದು ಮಾಧ್ಯಮದ ಎದುರು ವಿವರಿಸಿದರು.
ಹಿಂದುಳಿದ ವರ್ಗದ ಮುಖ್ಯಮಂತ್ರಿ ಎನಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಹಾಗೂ ನಮ್ಮ ಸಂವಿಧಾನ ನಮ್ಮ ಹೆಮ್ಮೆ ಎಂದು ಹೇಳಿಕೊಳ್ಳುವ ಗೃಹಮಂತ್ರಿ ಜಿ ಪರಮೇಶ್ವರ ಅವರಿಂದಲೂ ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಅಸಾಧ್ಯವೇ? ಎಂದು ಪ್ರಶ್ನಿಸಿದರು. `ನ್ಯಾಯಾಲಯದ ಅದೇಶದಿಂದ ಗುಡ್ಡ ಕುಸಿತ ಪ್ರಕರಣದಲ್ಲಿ ನೋಂದವರಿಗೆ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಿದೆ. ಶಿರೂರು ಗುಡ್ಡ ಕುಸಿತದಲ್ಲಿ ಸಾವನ್ನಪ್ಪಿದವರಿಗೆ ನ್ಯಾಯ ಕೊಡಿಸಿಯೇ ತಿರುತ್ತೇನೆ’ ಎಂದು ಘೋಷಿಸಿದರು.