
ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಈ ತಿದ್ದುಪಡಿಯ ವಿರುದ್ಧ ಕಾಂಗ್ರೆಸ್ ನಾಯಕರ ಆಕ್ರೋಶ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಕರ್ನಾಟಕ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿಗೆ ವಿದೇಶಿ ಸಂಖ್ಯೆಯಿಂದ ಬೆದರಿಕೆ ಕರೆಗಳು ಬಂದಿರುವ ಘಟನೆ ಬೆಳಕಿಗೆ ಬಂದಿದೆ.
ಮಂಗಳೂರು ನಗರ ಪೊಲೀಸರು ಈ ಸಂಬಂಧ ದೂರು ಸ್ವೀಕರಿಸಿದ್ದು, ಅನ್ವರ್ ಮಾಣಿಪ್ಪಾಡಿಗೆ ಭದ್ರತೆ ಒದಗಿಸಲು ಕ್ರಮ ಕೈಗೊಂಡಿದ್ದಾರೆ. ಮಾಣಿಪ್ಪಾಡಿ ಅವರ ಹೇಳಿಕೆಯಂತೆ, ವಕ್ಫ್ ಕಾಯಿದೆ ತಿದ್ದುಪಡಿ ಅಂಗೀಕಾರವಾದ ನಂತರ ವಿದೇಶಿ ಸಂಖ್ಯೆಗಳಿಂದ ಹಿಂಸಾತ್ಮಕ ಭಾಷೆಯಲ್ಲಿ ಕರೆಗಳು ಬರುತ್ತಿವೆ. ಹಿಂದಿ, ಮರಾಠಿ, ಇಂಗ್ಲೀಷ್ ಹಾಗೂ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಅಜ್ಞಾತ ವ್ಯಕ್ತಿಗಳು ಜೀವ ಬೆದರಿಕೆ ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
“ನಿನ್ನನ್ನು ಬಿಡುವುದಿಲ್ಲ, ನಿನ್ನ ಸಮುದಾಯದವರೇ ನಿನ್ನ ವಿರುದ್ಧ ತಿರುಗುತ್ತಾರೆ” ಎಂಬಂತಹ ತೀಕ್ಷ್ಣ ಮಾತುಗಳಿಂದ ಕರೆ ಮಾಡಿದ ವ್ಯಕ್ತಿಗಳು ಬೆದರಿಸಿದ್ದಾರೆ. ಈ ಬಗ್ಗೆ ಮಾಣಿಪ್ಪಾಡಿ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಅವರಲ್ಲಿ ದೂರು ದಾಖಲಿಸಿದ್ದು, ತಮ್ಮ ಭದ್ರತೆ ಹೆಚ್ಚಿಸಲು ಮನವಿ ಮಾಡಿಕೊಂಡಿದ್ದಾರೆ.
ಅನ್ವರ್ ಮಾಣಿಪ್ಪಾಡಿ, ಈ ವಕ್ಫ್ ಕಾಯಿದೆ ತಿದ್ದುಪಡಿ ಅನ್ವಯವಾಗಿರುವುದರಿಂದ ಸಂತೋಷ ವ್ಯಕ್ತಪಡಿಸಿದ್ದು, “ನಾನು ನೀಡಿದ್ದ ವರದಿಯ ಆಧಾರದ ಮೇಲೆ ಕೇಂದ್ರ ಸರ್ಕಾರ ಈ ತಿದ್ದುಪಡಿ ಮಸೂದೆ ಜಾರಿಗೆ ತಂದಿದೆ” ಎಂದು ಹೇಳಿದ್ದಾರೆ. ಆದರೆ ಇದರಿಂದ ಅಸಮಾಧಾನಗೊಂಡ ಕೆಲವು ವಲಯಗಳು ಅವರನ್ನು ಬೆದರಿಸಲು ಮುಂದಾಗಿವೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣ ಸಂಬಂಧ ಮಂಗಳೂರು ಪೊಲೀಸರು ತನಿಖೆ ಆರಂಭಿಸಿದ್ದು, ವಿದೇಶಿ ಸಂಖ್ಯೆಗಳ ಮೂಲ ಮತ್ತು ಕರೆ ಮಾಡಿದವರ ಗುರುತು ಪತ್ತೆ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಅಲ್ಟ್ರಾ-ಮಾಡರ್ನ್ ಟೆಕ್ನಾಲಜಿಯ ಬಳಕೆ ಮಾಡಿರುವ ಈ ಕರೆಗಳ ಹಿಂದಿನ ವ್ಯಕ್ತಿಗಳನ್ನು ಪತ್ತೆ ಹಚ್ಚಲು ಪೊಲೀಸರು ಸೈಬರ್ ಸೆಲ್ ಸಹಾಯ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ವಕ್ಫ್ ಕಾಯಿದೆ ತಿದ್ದುಪಡಿ ಕುರಿತು ರಾಜಕೀಯ ತಳಹದಿ ಬದಲಾಗುತ್ತಿದೆ. ಈ ಕಾಯ್ದೆಯ ವಿರುದ್ಧ ಕಾಂಗ್ರೆಸ್ ನಾಯಕರು ಹರಿಹಾಯಿಸುತ್ತಿರುವ ಬೆನ್ನಲ್ಲೇ, ಮಾಣಿಪ್ಪಾಡಿಗೆ ಬಂದಿರುವ ಬೆದರಿಕೆ ಕರೆಗಳು ಹೊಸದೊಂದು ಚರ್ಚೆಗೆ ಕಾರಣವಾಗಿವೆ. ಇದರ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆ ತೀವ್ರಗೊಳಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.