
ಉಡುಪಿ: ಸರ್ಕಾರಿ ಉದ್ಯೋಗದ ಭರವಸೆ ನೀಡಿ ನರ್ಸ್‌ಗೊಬ್ಬರ ಕೈಯಿಂದ ಲಕ್ಷಕ್ಕೂ ಹೆಚ್ಚು ರೂಪಾಯಿ ವಂಚಿಸಿರುವ ಘಟನೆ ಉಡುಪಿಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿ ಮೂಲದ ರೇವತಿ (31) ಎಂಬವರು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸಿಂಗ್ ಕೆಲಸ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಪಡುಬಿದ್ರಿಯ ಸಚಿನ್ ಎಂಬಾತನ ಪರಿಚಯವಾಗಿತ್ತು. ಆತನು ತನ್ನನ್ನು ಸರ್ಕಾರಿ ನೌಕರಿ ಹೊಂದಿಸಬಲ್ಲ ವ್ಯಕ್ತಿಯಾಗಿ ಪರಿಚಯಿಸಿಕೊಂಡಿದ್ದನು.
ಸಚಿನ್, “ಮೇಲಾಧಿಕಾರಿಗಳಿಗೆ ಹಣ ನೀಡಬೇಕು, ನಂತರ ನೌಕರಿ ಪಕ್ಕಾ” ಎಂಬ ಮಾತುಗಳನ್ನು ನಂಬಿಸಿ, ಹಂತ ಹಂತವಾಗಿ 2024ರ ಏಪ್ರಿಲ್ 11ರಿಂದ ಮೇ 20ರವರೆಗೆ ರೇವತಿ ಅವರಿಂದ ಒಟ್ಟು ರೂ. 1,65,000 ಹಣ ಸ್ವೀಕರಿಸಿದ್ದಾನೆ ಎಂಬುದು ದೂರುದಾರೆಯ ವಾದ.
ಈಷ್ಟೇ ಅಲ್ಲದೆ, ಉದ್ಯೋಗದ ಪ್ರಕ್ರಿಯೆಗೆ ಅಗತ್ಯವಿದೆ ಎಂಬ ಕಾರಣದಿಂದಾಗಿ ರೇವತಿಯ ಪಾನ್ ಕಾರ್ಡ್, ಆಧಾರ್ ಕಾರ್ಡ್, ಜಾತಿ ಹಾಗೂ ಆದಾಯ ಪ್ರಮಾಣಪತ್ರ, ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ಅಂಕಪಟ್ಟಿ, ನರ್ಸಿಂಗ್ ಡಿಪ್ಲೊಮಾ ಸೇರಿದಂತೆ ಎಲ್ಲಾ ಮೂಲ ದಾಖಲೆಗಳನ್ನು ಕೂಡ ಪಡೆಯಲಾಗಿತ್ತು.
ಆದರೆ ಇಷ್ಟು ದಿನ ಕಳೆದರೂ ಯಾವುದೇ ರೀತಿಯ ಸರ್ಕಾರಿ ಉದ್ಯೋಗ ನೀಡದೇ, ಹಣ ಹಾಗೂ ದಾಖಲಾತಿಗಳನ್ನು ಕೂಡ ಹಿಂದಿರುಗಿಸದೇ ಮೋಸಮಾಡಿರುವುದಾಗಿ ದೂರಲಾಗಿದೆ. ಈ ಸಂಬಂಧ ಉಡುಪಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.