ಮುಂಡಗೋಡ :ಪಟ್ಟಣದ ಟೌನ್ ಹಾಲ್ ನಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ 34.30 ಕೋಟಿ ವೆಚ್ಚದ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ ಮತ್ತು ಕಾರ್ಮಿಕ ಸಚಿವರಾದ ಶಿವರಾಮ್ ಹೆಬ್ಬಾರ್ ಅವರು ಮಾತನಾಡಿದರು.
ಮುಂಡಗೋಡ ಪಟ್ಟಣದ ಅಮ್ಮಾಜಿ ಕೆರೆಯಿಂದ ಸಿಡ್ಲಗುಂಡಿ ಬ್ರಿಜ್ ವರೆಗೆ 22.50 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಅಗಲೀಕರಣ ಹಾಗೂ ನೂತನ ರಸ್ತೆ ನಿರ್ಮಾಣ, ಮುಂಡಗೋಡ ಪಟ್ಟಣದಿಂದ ಶಿಗ್ಗಾಂವಿ ಗಡಿಯವರೆಗೆ 6.80 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆಯ ಅಗಲೀಕರಣ ಹಾಗೂ ನೂತನ ರಸ್ತೆ ನಿರ್ಮಾಣ,3 ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಬಾಚಣಿಕೆಯಲ್ಲಿ ನಿರ್ಮಾಣವಾದ ನೂತನ ಸರ್ಕ್ಯೂಟ್ ಹೌಸ್ ಉದ್ಘಾಟನೆ,2 ಕೋಟಿ ರೂಪಾಯಿ ವೆಚ್ಚದಲ್ಲಿ ಮುಂಡಗೋಡ ಪಟ್ಟಣದಲ್ಲಿ ನೂತನ ಪರಿವೀಕ್ಷಣಾ ಮಂದಿರ ನಿರ್ಮಾಣ ಕಾಮಗಾರಿಗೆ ಚಾಲನೆಯನ್ನು ಲೋಕೋಪಯೋಗಿ ಸಚಿವರಾದ ಸಿಸಿ ಪಾಟೀಲ್ ಹಾಗೂ ಕಾರ್ಮಿಕ ಸಚಿವರಾದ ಶಿವರಾಮ್ ಹೆಬ್ಬಾರ್ ಅವರು ನೆರವೇರಿಸಿದರು.
ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ ಮಾತನಾಡಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹಲವು ಸವಾಲುಗಳನ್ನ ಎದುರಿಸಿದೆ. ಅತಿವೃಷ್ಟಿ, ಕೋವಿಡ್ ನಿಂದ ಸಾಕಷ್ಟು ಹಾನಿಯಾಯಿತು. ರಾಜ್ಯದ ಬೊಕ್ಕಸಕ್ಕೆ ಲಾಕ್ ಡೌನ್ ನಿಂದ ಹಣ ಬರದಂತಾಯಿತು. ನಂತರ ಸಿಎಂ ಆಗಿದ್ದ ಯಡಿಯೂರಪ್ಪನವರು ರಾಜ್ಯ ಪ್ರವಾಸ ಮಾಡಿ ಎಲ್ಲವನ್ನೂ ಎದುರಿಸಿದ್ದಾರೆ. ರಾಜ್ಯಕ್ಕೆ ಸದ್ಯ ಸಂಪನ್ಮೂಲ ಹರಿದು ಬರುತ್ತಿದ್ದು ಅಭಿವೃದ್ದಿ ಕೆಲಸವನ್ನು ಇನ್ನೂ ಹೆಚ್ಚಾಗಿ ಮಾಡುತ್ತೇವೆ, ಅತಿವೃಷ್ಟಿಯಿಂದ ಉಂಟಾದ ಹಾನಿಗೆ ರಾಜ್ಯದಲ್ಲಿ ಅತೀ ಹೆಚ್ಚು ಅನುದಾನವನ್ನು ಲೋಕೋಪಯೋಗಿ ಇಲಾಖೆಯಿಂದ ಶಿವರಾಮ್ ಹೆಬ್ಬಾರ ಅವರು ಪಡೆದಿದ್ದಾರೆ ಎಂದರು.
ಸಚಿವ ಶಿವರಾಮ್ ಹೆಬ್ಬಾರ್ ಮಾತನಾಡಿ ಶಿಡ್ಲಗುಂಡಿಯಿಂದ ಮುಂಡಗೋಡಿಗೆ ಸುಮಾರು 22.50 ಕೋಟಿ ವೆಚ್ಚದಲ್ಲಿ ನೂತನ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದು ಶೀಘ್ರದಲ್ಲೇ ಕಾಮಗಾರಿ ಮುಕ್ತಾಯವಾಗಲಿದ್ದು ಜನರಿಗೆ ಇದರಿಂದ ಸಾಕಷ್ಟು ಉಪಯೋಗವಾಗಲಿದೆ ಎಂದರು.
ಕ್ಷೇತ್ರಕ್ಕೆ ನಾನು ಸಚಿವನಾದ ನಂತರ ರಸ್ತೆ ಕಾಮಗಾರಿಗಳಿಗೆ ದೊಡ್ಡ ಪ್ರಮಾಣದಲ್ಲಿ ಹಣ ಬಂದಿದೆ. 119 ಕಾಲು ಸಂಕಗಳನ್ನ ಕ್ಷೇತ್ರಕ್ಕೆ ಲೋಕೋಪಯೋಗಿ ಇಲಾಖೆಯಿಂದ ನೀಡಲಾಗಿದೆ. ಗುಳ್ಳಾಪುರ ಸೇತುವೆ ಕುಸಿದಾಗ ಸ್ವತ: ಸಿಸಿ ಪಾಟೀಲ್ ನೋಡಿ ಸೇತುವೆ ನಿರ್ಮಾಣಕ್ಕೆ ಹಣ ನೀಡಿದ್ದಾರೆ. ಇದರಿಂದ ಯಲ್ಲಾಪುರ ಕ್ಷೇತ್ರದಲ್ಲಿ ಅಭಿವೃದ್ದಿ ಹೆಚ್ಚಾಗಲು ಕಾರಣವಾಗಿದೆ ಎಂದರು.
ಸರ್ಕಾರದ ಮೇಲೆ ಕೆಲವರು 40 ಪರ್ಸಂಟೆಜ್ ಆರೋಪ ಮಾಡುವವರು, ಯಾವುದೇ ಒಂದು ದಾಖಲೆಯನ್ನ ನೀಡಲಿ. ಕೇವಲ ರಾಜಕೀಯ ಕಾರಣಕ್ಕಾಗಿ ಆರೋಪ ಮಾಡಬಾರದು. ಅವರ ಎಲ್ಲಾ ಸವಾಲುಗಳನ್ನ ಸ್ವೀಕರಿಸಲು ಬಿಜೆಪಿ ಸಿದ್ದವಿದೆ. ಎಲ್ಲಿಯ ವರೆಗೆ ಬಡವರ ಪರ ಕೆಲಸ ಮಾಡುತ್ತೇವೋ ಅಲ್ಲಿಯ ವರೆಗೆ ಜನರ ಆಶಿರ್ವಾದ ಪಡೆಯಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ನಾಗಭೂಷಣ ಹಾವಣಗಿ,ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಲ್ ಟಿ ಪಾಟೀಲ್, ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷರಾದ ರವಿ ಗೌಡ ಪಾಟೀಲ್, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಜಯಸುಧಾ ಭೋವಿ, ಉಪಾಧ್ಯಕ್ಷರಾದ ಶ್ರೀಕಾಂತ್ ಸಾನು, ತಹಸಿಲ್ದಾರ್ ಶಂಕರ್ ಗೌಡಿ, ಲೋಕೋಪಯೋಗಿ ಇಲಾಖೆಯ ಮುಂಡಗೋಡ ಉಪ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಮಹದೇವಪ್ಪ ಹ್ಯಾಟಿ, ಪ್ರಮುಖರಾದ ಉಮೇಶ್ ಬಿಜಾಪುರ್, ಸಿದ್ದಪ್ಪ ಹಡಪದ, ಜಿ ಎಸ್ ಕಾತೂರ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ಮಹೇಶ್ ಹೊಸಕೊಪ್ಪ, ಜಿಲ್ಲಾ ಎಸ್ ಟಿ ಮೋರ್ಚಾ ಅಧ್ಯಕ್ಷರಾದ ಸಂತೋಷ್ ತಳವಾರ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು,ಮುಂತಾದವರು ಉಪಸ್ಥಿತರಿದ್ದರು.
ವರದಿ:ಮಂಜುನಾಥ ಹರಿಜನ