ಹೈದರಾಬಾದಿನ ಚಂದನ್ ನಗರದಲ್ಲಿ ವಾಸಿಸುತ್ತಿದ್ದ 27 ವರ್ಷದ ಅವಿವಾಹಿತ ಮಹಿಳೆ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ಶಾಲೆಯಲ್ಲಿಯೇ ವ್ಯಾಸಂಗ ಮಾಡುತ್ತಿದ್ದ ಹತ್ತನೇ ತರಗತಿ ವಿದ್ಯಾರ್ಥಿ ಪ್ರೇಮ ಪಾಶದಲ್ಲಿ ಈಕೆ ಬಿದ್ದಿದ್ದರು. ಫೆಬ್ರವರಿ 16 ರಂದು ಶಾಲೆಗೆ ಹೋಗುತ್ತೇನೆ ಎಂದು ಹೇಳಿದ್ದ ಶಿಕ್ಷಕಿ ಮನೆಗೆ ಬಾರದೆ ನಾಪತ್ತೆಯಾಗಿದ್ದು ಫೆಬ್ರವರಿ 17ರಂದು ಪ್ರಕರಣ ದಾಖಲಿಸಲಾಗಿತ್ತು. ಫೆಬ್ರವರಿ 20ರಂದು ಅದೇ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಕೂಡ ನಾಪತ್ತೆಯಾಗಿದ್ದು, ಪೋಷಕರು ಶಿಕ್ಷಕಿ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ದಾಖಲಿಸಿದ್ದರು.
ಇವರಿಬ್ಬರೂ ರೈಲಿನಲ್ಲಿ ಬೆಂಗಳೂರಿಗೆ ತೆರಳಿದ್ದು ತಿಳಿದುಬಂದ ಬಳಿಕ ಅವರುಗಳ ಪತ್ತೆಗಾಗಿ ಪೊಲೀಸರು ವ್ಯಾಪಕ ತನಿಖೆ ಕೈಗೊಂಡಿದ್ದರು. ಬೆಂಗಳೂರು – ಹೈದರಾಬಾದಿನ ವಿವಿಧ ಲಾಡ್ಜ್ ಗಳಲ್ಲಿ ತಂಗಿದ್ದ ಇವರುಗಳು ಫೆಬ್ರವರಿ 27ರಂದು ಹೈದರಾಬಾದಿನ ಗಚ್ಚಿಬೊಲಿ ಠಾಣೆಯ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಶನಿವಾರದಂದು ಶಿಕ್ಷಕಿಯನ್ನು ಕಳುಹಿಸಿದ್ದ ಪೊಲೀಸರು ಕೌನ್ಸೆಲಿಂಗ್ ನಡೆಸಿದ್ದು, ಒಂದೊಮ್ಮೆ ಹದಿನಾರು ವರ್ಷದ ಅಪ್ರಾಪ್ತ ವಿದ್ಯಾರ್ಥಿ ಜೊತೆಗೆ ಹೋಗುವುದಾಗಿ ಹೇಳಿದರೆ ಅಪಹರಣ ಕೇಸ್ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ. ಇದೀಗ ಇಬ್ಬರನ್ನು ಅವರವರ ಮನೆಗೆ ಕಳುಹಿಸಿಕೊಡಲಾಗಿದೆ.