ಮನೆಯಲ್ಲಿ ಯಾರೂ ಹಿರಿಯರು ಇಲ್ಲದ ವೇಳೆ ಬಾಲಕಿಗೆ ಚಾಕ್ಲೇಟ್ ಕೊಡಿಸುವ ಆಮಿಷ ಒಡ್ಡಿ ಲೈಂಗಿಕ ದೌರ್ಜನ್ಯ ನಡೆಸಿದ ಹೀನಾಯ ಘಟನೆಯೊಂದು ದಾವಣಗೆರೆಯಲ್ಲಿ ನಡೆದಿದೆ. ಕಳೆದ ಫೆಬ್ರವರಿ ೧೪ರಂದು ಘಟನೆ ನಡೆದಿದೆ. ೨ನೇ ತರಗತಿಯಲ್ಲಿ ಕಲಿಯುತ್ತಿರುವ ಏಳು ವರ್ಷದ ಬಾಲಕಿಗೆ ಅವತ್ತು ಶಾಲೆ ರಜೆ ಇದ್ದ ಕಾರಣ. ಆಕೆಯ ತಂದೆ-ತಾಯಿ ಮಗಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದರು. ಮಗುವಿಗೆ ನೀನು ಇಲ್ಲೇ ಮನೆಯಲ್ಲಿ ಆಟವಾಡುತ್ತಿರು ಎಂದು ಹೇಳಿ ಹೋಗಿದ್ದರು. ಆ ದಿನ ಮಧ್ಯಾಹ್ನ 1:00ರ ಸುಮಾರಿಗೆ ಮನೆಗೆ ಬಂದಾಗ ಬಾಲಕಿ ಅಳುತ್ತಿರುವುದು ಕಂಡುಬಂತು. ತೀವ್ರ ಯಾತನೆಯಿಂದ ನರಳುತ್ತಿದ್ದ ಆಕೆಯನ್ನು ವಿಚಾರಿಸಿದಾಗ ಆಕೆ ಅಲ್ಲಿ ನಡೆದ ಘನ ಘೋರ ಘಟನೆಯನ್ನು ವಿವರಿಸಿದಳು. ಮಧ್ಯಾಹ್ನ ೧೨ ಗಂಟೆಯ ಹೊತ್ತಿಗೆ ಪಕ್ಕದ ಮನೆಯ ನಾಗ ಎಂಬ ವ್ಯಕ್ತಿ ಚಾಕ್ಲೇಟ್ ನೀಡುವ ಆಮಿಷ ಒಡ್ಡಿ ದೇವಸ್ಥಾನದ ಪಕ್ಕದ ಬಚ್ಚಲು ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಿದ್ದು ಬೆಳಕಿಗೆ ಬಂತು. ಬಾಲಕಿಯ ಮೇಲೆ ದೌರ್ಜನ್ಯ ನಡೆಸಿದ ಕಾಮುಕ ನಾಗನನ್ನು ಹುಡುಕಿಕೊಂಡು ಹೋದಾಗ ಆತ ಯಾವುದೋ ರಿಕ್ಷಾ ಹತ್ತಿ ಹೋಗಿರುವುದು ತಿಳಿಯಿತು. ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿದಾಗ ಕೆಲವೇ ಗಂಟೆಗಳಲ್ಲಿ ಆತನನ್ನು ಬಂಧಿಸಲಾಗಿದೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತೆ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಬಾಲಕಿ ಇನ್ನು ಭಯದಲ್ಲೇ ಇದ್ದಾಳೆ. ಈ ಕುರಿತು ಆರೋಪಿಯ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದೆ.